ಯಾದಗಿರಿ ಪಿಎಸ್ಐ ಅನುಮಾನಸ್ಪದ ಸಾವು; ಕಾಂಗ್ರೆಸ್ನ ಆ ಶಾಸಕನ ವಿರುದ್ಧ ದೂರು: ಪರಮೇಶ್ವರ್ ಏನಂದ್ರು?
ಬೆಂಗಳೂರು, ಆಗಸ್ಟ್ 3: ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ (34) ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪಿಎಸ್ಐ ಪರಶುರಾಮ ಅವರ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪಣ್ಣಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ, ಯಾದಗಿರಿ ಪಿಎಸ್ಐ ಅನುಮಾನಸ್ಪದ ಸಾವು ಪ್ರಕರಣದ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್‌ನೋಟ್ ಬರೆದಿಟ್ಟಿಲ್ಲ. ವರ್ಗಾವಣೆ ವಿಚಾರಕ್ಕೆ ನೊಂದಿದ್ದರು ಎಂದು ಆತನ ಪತ್ನಿ ದೂರು ಕೊಟ್ಟಿದ್ದಾರೆ. ಅವರ ಆರೋಪವನ್ನು ಪರಿಗಣಿಸುತ್ತೇನೆ. ಆ ಆಯಾಮದಲ್ಲಿಯು ತನಿಖೆ ನಡೆಯಲಿದೆ. ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಸ್ಥಳೀಯ ಶಾಸಕರಿಗೆ ಹಣ ಕೊಟ್ಟಿದ್ದರು ಎಂಬ ಆರೋಪವನ್ನು ಸರಿ ಅಥವಾ ಇಲ್ಲ ಅಂತ ಹೇಳಲು ಬರುವುದಿಲ್ಲ. ತನಿಖೆ ನಡೆಸಿದ ನಂತರ ಸತ್ಯಾಂಶ ಹೊರಬರಲಿದೆ. ನಾನು ಸಮುದಾಯ ಯಾವುದು ಎಂಬುದನ್ನು ನೋಡುವುದಿಲ್ಲ. ಕಾನೂನನ್ನು ನೋಡುತ್ತೇನೆ. ಆ ರೀತಿಯ ಘಟನೆ ನಡೆದಾಗ ಎಫ್‌ಐಆರ್ ಹಾಕಿಕೊಳ್ಳಬೇಕು. ಎಫ್‌ಐಆರ್ ದಾಖಲಿಸುವ ಮುನ್ನ ಪರಿಶೀಲನೆ ನಡೆಸುತ್ತಾರೆ. ಶಾಸಕರು ಇದ್ದರು ಅಥವಾ ಬೇರೆಯವರಿದ್ದರು, ಆಡಳಿತ ಪಕ್ಷದ ಶಾಸಕರಾಗಿದ್ದರು ಸಹ ಎಫ್ಐಆರ್ ದಾಖಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನವರು ಪಾದಯಾತ್ರೆಯನ್ನು ಕಾನೂನು ಬಾಹಿರವಾಗಿ ಮಾಡುವುದಿಲ್ಲ. ಶಾಂತಿಯುತವಾಗಿ ನಡೆಸುವುದಾಗಿ ಕೇಳಿಕೊಂಡಿದ್ದರಿಂದ ಸಿಎಂ ಜೊತೆ ಚರ್ಚಿಸಿ ಅವಕಾಶ ನೀಡಿದ್ದೇವೆ. ಯಾವುದೇ ರೀತಿಯ ಅಹಿತಕರ ಘಟನೆಗಳಾಗಬಾರದು, ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಕಂಡಿಷನ್ ಹಾಕಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ವಿರುದ್ಧ ದೂರು
ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಪಂಪಣ್ಣಗೌಡ ಕಾರಣವೆಂದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕರು ಪೋಸ್ಟಿಂಗ್ ಕೊಟ್ಟಿಲ್ಲ. ಶಾಸಕರು ತಪ್ಪು ಮಾಡಿದ್ದಾರೆ ಅವರು ಸ್ಥಳಕ್ಕೆ ಬರಬೇಕು ಎಂದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಒತ್ತಾಯಿಸಿದ್ದಾರೆ. ಶ್ವೇತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಬಳಿ ದೂರು ನೀಡಿದ್ದಾರೆ.












Click it and Unblock the Notifications