ಮತ್ತೆ ಕೇಳಿಬಂತು ಪ್ರತ್ಯೇಕ ರಾಜ್ಯದ ಕೂಗು
ಕಲಬುರಗಿ, ನ.1 : ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಪ್ರತ್ಯೇಕ ರಾಜ್ಯದ ಅಪಸ್ವರ ಕೇಳಿಬಂದಿದೆ. ಹೈದರಾಬಾದ್-ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಒತ್ತಾಯಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ಶನಿವಾರ ನಡೆದಿದೆ.
ನಗರದ ಸರ್ದಾರ್ ವಲ್ಲಬಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಒಕ್ಕೂಟದ ಕಾರ್ಯಕರ್ತರು ಹೈದರಾಬಾದ್-ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಬೇಕು ಎಂದು ಒತ್ತಾಯಿಸಿ, ಧ್ವಜಾರೋಹಣಕ್ಕೆ ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಪ್ರಾದೇಶಿಕ ಅಸಮತೋಲನೆ ನಿವಾರಿಸಲು ಪ್ರತ್ಯೇಕ ರಾಜ್ಯವೊಂದೇ ಪರಿಹಾರ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ, ಧ್ವಜಾರೋಹಣ ಮಾಡದಂತೆ ತಡೆದರು. [ಗುಲ್ಬರ್ಗಾ ಹೆಸರು ಬದಲಾವಣೆಗೆ ಮುಸ್ಲಿಂ ವಿರೋಧ]
ಪ್ರತ್ಯೇಕ ರಾಜ್ಯ ರಚನೆ ಇಲ್ಲ : ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಖಂಡ ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಗಣ್ಯರು ಹೋರಾಟ ಮಾಡಿದ್ದು, ಪ್ರತ್ಯೇಕ ರಾಜ್ಯ ರಚನೆ ವಿಚಾರ ಅಪ್ರಸ್ತುತ ಹಾಗೂ ಖಂಡನೀಯವೆಂದು ಹೇಳಿದ್ದಾರೆ. [12 ನಗರಗಳಿಗೆ ಇಂದಿನಿಂದ ಹೊಸ ಹೆಸರು]
ರಾಜ್ಯದ ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹೈದರಾಬಾದ್-ಕರ್ನಾಟಕ ಭಾಗಕ್ಕೆ ಸಂವಿಧಾನದ 371ನೇ (ಜೆ) ತಿದ್ದುಪಡಿಯನ್ವಯ ನೀಡಿರುವ ವಿಶೇಷ ಸ್ಥಾನಮಾನದಡಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಸಿಎಂ ಘೋಷಿಸಿದ್ದಾರೆ.












Click it and Unblock the Notifications