ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
ಬೆಂಗಳೂರು, ಸೆಪ್ಟೆಂಬರ್ 14: ಕರ್ನಾಟಕ ಸರ್ಕಾರವು ಪ್ರಾಣಿ ಹಿಂಸೆಯನ್ನು ತಡೆಗಟ್ಟಲು ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವ ಚಿಂತನೆಯನ್ನು ನಡೆಸುತ್ತಿದೆ.
ಈ ಬಗ್ಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುಪಾಲನ ಭವನದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ ಮಾತನಾಡಿ, ಪ್ರಾಣಿ ಹಿಂಸೆ ತಡೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆಯಡಿ ರಾಜ್ಯಾದ್ಯಂತ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಗೋಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯಿದೆ 2020ರ ಪ್ರಕರಣಗಳನ್ನು ದಾಖಲಿಸುವಾಗ ನಿಯಮ ಪಾಲಿಸದ ಕಾರಣ ಅಕ್ರಮ ಗೋ ಸಾಗಾಟಗಾರರು ಹಾಗೂ ಅಕ್ರಮ ಕಸಾಯಿಖಾನೆಗಳ ಮಾಲೀಕರು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಎಫ್‌ಐಆರ್ ದಾಖಲಿಸುವ ಸಂದರ್ಭದಲ್ಲಿ ಗೋಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆ 2020 ಜಾರಿಗೊಳಿಸಲು ಪ್ರತಿ ಜಿಲ್ಲೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಪ್ರಭು ಚವ್ಹಾಣ ಅಭಿಪ್ರಾಯಪಟ್ಟರು.

ಚಾರ್ಜ್ ಶೀಟನಲ್ಲಿ ಹೆಸರು ಕೈಬಿಡಲಾಗುತ್ತಿದೆ
ಈ ವೇಳೆ ಈ ಕಾಯ್ದೆ ಜಾರಿ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಚಾರ್ಜ್ ಶೀಟ್‌ನಲ್ಲಿ ನಮೂದಾಗಿರುವ ಹೆಸರುಗಳನ್ನು ಕೈಬಿಡಲಾಗುತ್ತಿದೆ. ರಾಜ್ಯದಲ್ಲಿ ಅನಧಿಕೃತ ಗೋಹತ್ಯೆ, ಸಾಗಣೆ, ಗೋಮಾಂಸ ಸಂಗ್ರಹಣೆಯನ್ನು ತಡೆಯಲಾಗುತ್ತಿಲ್ಲ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು.

ಎಫ್‌ಐಆರ್ ದಾಖಲಿಸದೆ ಸಹಕರಿಸುತ್ತಿಲ್ಲ
ಕೆಲವೆಡೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದ್ದು, ಕೆಲವೆಡೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸದೆ ಸಹಕರಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಗೃಹ ಸಚಿವರೊಂದಿಗೆ ಸಭೆ ನಡೆಸುವುದಾಗಿ ಚವಾಣ್ ಹೇಳಿದರು. ಮುಂದುವರೆದು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಪ್ರಾಣಿಗಳ ಮೇಲಿನ ಕ್ರೌರ್ಯ ಮತ್ತು ಹಿಂಸೆಯನ್ನು ತಡೆಗಟ್ಟಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಪಶುಸಂಗೋಪನೆ ಸಚಿವರು ತಿಳಿಸಿದರು.

ಜಾನುವಾರು ಸಾಕಣೆದಾರರಿಗೆ ಅನುಕೂಲ
ಗೋಹತ್ಯೆ ತಡೆಗೆ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಹಾಗೂ ಗೋಹತ್ಯೆ ತಡೆಯಲು ಸಾಧ್ಯ. ರೈತರಿಗೆ ಮತ್ತು ಜಾನುವಾರು ಸಾಕಣೆದಾರರಿಗೆ ಅನುಕೂಲವಾಗುವಂತೆ ಜಾನುವಾರುಗಳ ಸಂರಕ್ಷಣೆ, ಆರೈಕೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರಚಿಕಿತ್ಸಾ ವಾಹನಗಳ ಮೂಲಕ ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಪಶು ಕಲ್ಯಾಣ ಮಂಡಳಿ ಸ್ಥಾಪನೆ, ಸಹಾಯವಾಣಿ
ಪಶು ಸಂಗೋಪನಾ ಇಲಾಖೆ ಸಚಿವರಾದ ನಂತರ ಜಾನುವಾರುಗಳನ್ನು ಸಾಕಿ ಪೋಷಿಸಿ ಅಕ್ರಮ ಕಸಾಯಿಖಾನೆಗಳಿಂದ ರಕ್ಷಿಸುವ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದೇನೆ. ಗೋಹತ್ಯೆ ನಿಷೇಧ ಕಾಯಿದೆ, ಪಶು ಕಲ್ಯಾಣ ಮಂಡಳಿ ಸ್ಥಾಪನೆ, ಪಶು ಸಹಾಯವಾಣಿ ಕೇಂದ್ರ ಸ್ಥಾಪನೆ, ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆ, 400 ಪಶು ವೈದ್ಯರು ಹಾಗೂ 250 ಕಿರಿಯ ಪಶು ನಿರೀಕ್ಷಕರ ನೇಮಕಾತಿ, ಗೋಮಾತಾ ಸಹಕಾರ ಸಂಘ, ಪುಣ್ಯಕೋಟಿ ಯೋಜನೆ. ಗೋಶಾಲೆಗಳನ್ನು ಸ್ವಾವಲಂಬಿ ಗೋಶಾಲೆಗಳನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರನ್ನು ಸಚಿವ ಪ್ರಭು ಚವ್ಹಾಣ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಪ್ರಾಣಿ ಕಲ್ಯಾಣ ಸಮಿತಿ ಸದಸ್ಯ ಮಹಾಂತೇಶ ದೊಡ್ಡನಗೌಡ ಪಾಟೀಲ, ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಹೀಂ, ನಿರ್ದೇಶಕ ಡಾ.ಮಂಜುನಾಥ ಪಾಳೇಗಾರ ಸೇರಿದಂತೆ ಹಲವರು ಸಭೆಯಲ್ಲಿದ್ದರು.












Click it and Unblock the Notifications