Priyank Kharge Profile: ಕರ್ನಾಟಕದ ನೂತನ ಸಚಿವ ಪ್ರಿಯಾಂಕ್ ಖರ್ಗೆ ಪರಿಚಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ಬಹುಮತ ಗಳಿಸಿದ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ನೂತನ ಸರ್ಕಾರ ರಚಿಸಿದೆ. ಶನಿವಾರ, ಮೇ 20ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ಕರ್ನಾಟಕ ನೂತನ ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಈ ಹಿಂದೆ 2016ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತು 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು.

ಪ್ರಿಯಾಂಕ್ ಖರ್ಗೆ ಅವರು ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ 13,638 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ನೂತನ ಸಚಿವ ಪ್ರಿಯಾಂಕ್ ಖರ್ಗೆ ಪರಿಚಯ
ಪ್ರಿಯಾಂಕ್ ಖರ್ಗೆ ಅವರು 22 ನವೆಂಬರ್ 1978ರಂದು (ವಯಸ್ಸು 44) ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ಖರ್ಗೆ ದಂಪತಿ ಪುತ್ರನಾಗಿ ಜನಿಸಿದರು. ಪ್ರಿಯಾಂಕ್ ಖರ್ಗೆಗೆ ಇಬ್ಬರು ಸಹೋದರರಿದ್ದು, ರಾಹುಲ್ ಖರ್ಗೆ ಮತ್ತು ಮಿಲಿಂದ್ ಖರ್ಗೆ. ಇಬ್ಬರು ಸಹೋದರಿಯರಿದ್ದು, ಪ್ರಿಯದರ್ಶಿನಿ ಖರ್ಗೆ ಮತ್ತು ಜಯಶ್ರೀ ಖರ್ಗೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಾಗಿರುವ ಪ್ರಿಯಾಂಕ್ ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ. 2013, 2018 ಮತ್ತು 2023ರಲ್ಲಿ ಸತತವಾಗಿ ಮೂರು ಬಾರಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸಕ್ರಿಯ ಸದಸ್ಯರಾಗಿದ್ದಾಗಲೇ ಅವರ ನಾಯಕತ್ವದ ಗುಣಗಳು ಬೆಳಕಿಗೆ ಬಂದವು. ಇದು ಅವರ ರಾಜಕೀಯ ಪಯಣಕ್ಕೂ ದಾರಿಯಾಯಿತು.
ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ (1996-1998) ವ್ಯಾಸಂಗ ಮಾಡಿದ ಪ್ರಿಯಾಂಕ್ ಖರ್ಗೆ, ನಂತರ ಗ್ರಾಫಿಕ್ಸ್‌ನಲ್ಲಿ ಡಿಪ್ಲೊಮಾ (ಗ್ರಾಫಿಕ್ ವಿನ್ಯಾಸ) ಮತ್ತು ಅನಿಮೇಷನ್‌ನಲ್ಲಿ ಸುಧಾರಿತ ಡಿಪ್ಲೊಮಾ (ಅನಿಮೇಷನ್, ಇಂಟರಾಕ್ಟಿವ್ ಟೆಕ್ನಾಲಜಿ, ವಿಡಿಯೋ ಗ್ರಾಫಿಕ್ಸ್ ಮತ್ತು ವಿಶೇಷ ಪರಿಣಾಮಗಳು) ಪದವಿ ಪಡೆದರು.
ವಿದ್ಯಾರ್ಥಿ ಕಾರ್ಯಕರ್ತನಾಗಿ ಈ ಅಲ್ಪಾವಧಿಯ ನಂತರ, ಅವರು ಕಾಂಗ್ರೆಸ್ ಸೇರಿದರು. ಶೀಘ್ರದಲ್ಲೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
ಪ್ರಿಯಾಂಕ್ ಖರ್ಗೆ ಅವರು 2007ರಿಂದ 2011ರವರೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಇದಕ್ಕೂ ಮುನ್ನ ಪ್ರಿಯಾಂಕ್ ಖರ್ಗೆ ಅವರು 2008ರ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತರು. ಬಳಿಕ 2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2016ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಹಿತಿ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಪಡೆದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚಿತಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ 4393 ಮತಗಳ ಅಂತರದಿಂದ ಗೆದ್ದರು. ಬಳಿಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯನ್ನು ನೀಡಲಾಯಿತು.
2019ರಲ್ಲಿ ಸಮ್ಮಿಶ್ರ ಸರ್ಕಾರ ಉರುಳಿದಾಗ ರಾಜೀನಾಮೆ ನೀಡಬೇಕಾಯಿತು. ನಂತರ ಪ್ರಿಯಾಂಕ್ ಖರ್ಗೆ ಅವರು 2022ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಇದೀಗ 2023ರಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಯಾವ ಖಾತೆ ಸಿಗಲಿದೆ ಎಂಬುದಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications