ಪ್ರಧಾನಿ ಮೋದಿ ಕನ್ನಡದಲ್ಲೇ ರಾಜ್ಯೋತ್ಸವಕ್ಕೆ ಶುಭಾಶಯ
ಇಂದು ಕರುನಾಡು 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಕನ್ನಡದಲ್ಲೇ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಕೋರಿದ್ದಾರೆ.
ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬದುಕಿನ ನಿತ್ಯೋತ್ಸವವಾಗಲಿ: ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ವಿಶೇಷವಾಗಿ ಶುಭಕೋರಿದ್ದಾರೆ. ಕನ್ನಡ ರಾಜ್ಯೋತ್ಸವ ಎಂದರೆ ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ದಿನ. ಕನ್ನಡದ ಬಗೆಗಿನ ಪ್ರೀತಿ-ಕಾಳಜಿ ಇಂದಿಗಷ್ಟೆ ಸೀಮಿತವಾಗದೆ, ನಮ್ಮೆಲ್ಲರ ಬದುಕಿನ ನಿತ್ಯೋತ್ಸವವಾಗಲಿ. ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದ್ದಾರೆ.
ವಿವಾದ ಸೃಷ್ಟಿ ಕನ್ನಡ ಕಟ್ಟುವ ಕೆಲಸವಲ್ಲ: ಕನ್ನಡ ರಾಜ್ಯೋತ್ಸವದಂದೇ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರಕ್ಕೆ ಪಾಠ ಹೇಳಿದ್ದಾರೆ. ತಾಯ್ನಾಡಿನ ನಾಡು ನುಡಿ ಕಟ್ಟುವ ಕೆಲಸ ಅಂದರೆ ಅದು ಅತ್ಯಂತ ಪವಿತ್ರದಾದ ಕೆಲಸ. ಅದಕ್ಕೆ ಬೇಕಾಗಿರುವುದು ಅಭಿಮಾನ, ಅಕ್ಕರೆ ಮತ್ತು ಶ್ರದ್ಧೆಯೇ ಹೊರತು, ಸುಳ್ಳು, ದ್ವೇಷ, ಕುತಂತ್ರ ಅಲ್ಲ ಎಂದಿದ್ದಾರೆ.

ವಿವಾದಗಳನ್ನು ಸೃಷ್ಟಿ ಮಾಡುವುದೇ ಕನ್ನಡ ಕಟ್ಟುವ ಕೆಲಸ ಎಂಬ ಭ್ರಮೆಯಿಂದ ಆಳುವ ಪಕ್ಷ ಹೊರಬರಬೇಕಾಗಿದೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಕನ್ನಡವನ್ನ ಉಳಿಸಿ ಬೆಳೆಸಿ, ಪಸರಿಸುವ ಕೆಲಸ ಮಾಡಬೇಕಿದೆ ಎಂದು ಅಶೋಕ್ ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಕರುನಾಡು. ಈ ನೆಲದಲ್ಲಿ ಜನ್ಮವೆತ್ತಿದ ನಾವೇ ಪುಣ್ಯವಂತರು. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ನಮ್ಮ ನಾಡ ಭಾಷೆಯಾದ ಕನ್ನಡವನ್ನು ಬೆಳೆಸೋಣ ಎಂದು ಶುಭಕೋರಿದ್ದಾರೆ.
ಬಿಜೆಪಿ ಸಂಸದ ಡಾ.ಕೆ.ಸುಧಾಕರ್, ಸಂಸ್ಕೃತಿ ಮತ್ತು ಪ್ರಗತಿಯ ಸಮ್ಮಿಲನವಾದ ನಮ್ಮ ಹೆಮ್ಮೆಯ ಕರ್ನಾಟಕದ ರಾಜ್ಯೋತ್ಸವದ ಸುದಿನದಂದು ಕನ್ನಡಿಗರಿಗೆ ಶುಭಾಶಯ ಕೋರಿದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಕವಿವಾಣಿಯಂತೆ ಭಾರತದ, ವಿಶ್ವದ ಅಭ್ಯುದಯಕ್ಕೆ ಕರ್ನಾಟಕದ, ಕನ್ನಡಿಗರ ಕೊಡುಗೆ ನಿರಂತರವಾಗಿರಲಿದೆ ಎಂದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯುಕ್ತರಾದ ತುಷಾರ್ ಗಿರಿನಾಥ್ ಹಾಗೂ ಎಸ್.ಆರ್ ಉಮಾಶಂಕರ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.












Click it and Unblock the Notifications