ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : 10 ಸಾವಿರ ಶಿಕ್ಷಕರ ನೇಮಕಾತಿ
ಬೆಂಗಳೂರು, ಜುಲೈ 03: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 10,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಕುರಿತಾಗಿ ಅನುಮತಿ ಕೋರಿ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದೆ.
ಶಿಕ್ಷಕ ಹುದ್ದೆಗೆ ಸಾಕಷ್ಟು ಆಕಾಂಕ್ಷಿಗಳು ನೇಮಕಾತಿ ಕುರಿತು ಕಾಯುತ್ತಿದ್ದು, ಈಗಾಗಲೇ ಶಿಕ್ಷಣ ಇಲಾಖೆ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಹಣಕಾಸು ಇಲಾಖೆ ಅನುಮತಿ ನೀಡಿದ ಕೂಡಲೇ ಅಧಿಸೂಚನೆ ಹೊರ ಬೀಳಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು, ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಪ್ರೌಢ ಶಾಲೆಗಳಲ್ಲಿ 10,000 ಸೇರಿ 45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ.

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000 ಪ್ರೌಥಶಾಲೆಗಳಲ್ಲಿ ಕನಿಷ್ಠ 5000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10,000 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ. ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಯು ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ನೀಡಿದ ತಕ್ಷಣ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.
ಇನ್ನೂ ಶಿಕ್ಷಣ ಇಲಾಖೆಯು ಹೊಸದಾಗಿ ಶಿಕ್ಷಕರ ನೇಮಕಾತಿ ಮಾಡುವುದಕ್ಕೂ ಮೊದಲು 2022- 23ನೇ ಸಾಲಿನಲ್ಲಿ ನೇಮಕ ಮಾಡಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿಲ್ಲ. ಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೊಸ ನೇಮಕಾತಿಗೆ ಹಿಂದಿನ ನೇಮಕಾತಿ ಆದೇಶವು ಮುಖ್ಯವಾಗಲಿದೆ. 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 13,352 ಮಂದಿ ಅರ್ಹತೆ ಪಡೆದಿದ್ದರು. ಇದರಲ್ಲಿ ಇಲ್ಲಿಯವರೆಗೂ 11,494 ಮಂದಿಗೆ ನೇಮಕಾತಿ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ.
ಈ ಪ್ರಕರಣ ಸದ್ಯ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಉಳಿದ ಅಭ್ಯರ್ಥಿಗಳಿಗೆ ಇನ್ನಷ್ಟೇ ಪ್ರಮಾಣಪತ್ರ ವಿತರಣೆ ಮಾಡಬೇಕಿದೆ. ಸುಪ್ರೀಂಕೋರ್ಟ್ ಮತ್ತು ಆರ್ಥಿಕ ಇಲಾಖೆ ಅನುಮತಿ ನೀಡಿದ ತಕ್ಷಣ ಇಲಾಖೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಈಗಾಗಲೇ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು 1.25 ಲಕ್ಷ ಮಂದಿ ಟಿಇಟಿ ಉತ್ತೀರ್ಣರಾಗಿ ಅರ್ಹತೆ ಪಡೆದಿದ್ದಾರೆ. ಅಲ್ಲದೇ ಜೂ. 30ರಂದು ಟಿಇಟಿ ನಡೆಸಲಾಗಿದ್ದು, 2.5 ಲಕ್ಷ ಮಂದಿ ಟಿಇಟಿ ಬರೆದಿದ್ದಾರೆ. ಕನಿಷ್ಠ 1.5 ಲಕ್ಷ ಮಂದಿ ಅರ್ಹ ಅಭ್ಯರ್ಥಿಗಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಪ್ರತಿ ವರ್ಷ 10 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಆದರೆ, 2023-24ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಾಗದ ಕಾರಣ ಆಕಾಂಕ್ಷಿಗಳ ಸಂಖ್ಯೆಯೂ ಸಹ ಹೆಚ್ಚಳವಾಗಿದೆ.
ಇನ್ನೂ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಮತ್ತು ಪ್ರೌಢಶಾಲೆಗಳಲ್ಲಿ 10 ಸಾವಿರ ಸೇರಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಅದರಂತೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ನೇಮಕ ಪ್ರಕ್ರಿಯೆಗಳು ನಡೆಯುತ್ತಿವೆ.












Click it and Unblock the Notifications