ಕಾಮಾಂಧ ಪ್ರಜ್ವಲ್ ರೇವಣ್ಣ ಕೇಸ್‌ನಂತೆ ಧರ್ಮಸ್ಥಳ ಪ್ರಕರಣದಲ್ಲೂ ನ್ಯಾಯ ಗೆಲ್ಲಬೇಕು... Prakash Raj
ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಕೇಸ್‌ನಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಕೇಸ್‌ನಲ್ಲಿ ಪ್ರಜ್ವಲ್ ಒಂದು ವರ್ಷದಿಂದ ಜೈಲು ವಾಸದಲ್ಲಿದ್ದು, ಅಂತಿಮ ಒಂದು ಕೇಸ್‌ನಲ್ಲಿ ಪ್ರಜ್ವಲ್ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಈ ಕೇಸ್‌ನಲ್ಲಿ ಅಂತಿಮ ಶಿಕ್ಷೆಯನ್ನು ನಾಳೆ ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಈ ಬಗ್ಗೆ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪ್ರಜ್ವಲ್ ಕೇಸ್ ಬಗ್ಗೆ ಪ್ರಕಾಶ್ ರಾಜ್ ಕಿಡಿಕಾರಿದ್ದರು. ನಮಗೆ 2 ಸಾವಿರ ಹೆಣ್ಣು ಮಕ್ಕಳು ಮುಖ್ಯ, ವಿಕೃತ ಕಾಮಿಯಲ್ಲ ಎಂದಿದ್ದರು. ಈ ಕೃತ್ಯ ಎಸಗಿದವನದ್ದು ಎಷ್ಟು ತಪ್ಪೋ? ಆ ಹೆಣ್ಣು ಮಕ್ಕಳ ವಿಡಿಯೋ ಹಂಚಿದವನೂ ಅಷ್ಟೇ ತಪ್ಪು ಮಾಡಿದ್ದಾನೆ. ರಾಜಕೀಯ ಏನೇ ಇದ್ದರೂ ಆ ಹೆಣ್ಣು ಮಕ್ಕಳ ಬಗ್ಗೆ ಸೂಕ್ಷ್ಮತೆ ಇರಬೇಕು, ಯೋಚನೆ ಮಾಡಬೇಕಿತ್ತು ಎಂದಿದ್ದರು.

ಇದೀಗ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ತೀರ್ಪು ಬಂದಿರುವ ಹಿನ್ನೆಲೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. "ಈ ಕಾಮಾಂಧ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲ ಒತ್ತಡಗಳ ನಡುವೆಯೂ ಪ್ರಮಾಣಿಕವಾಗಿ ತನಿಖೆ ನಡೆಸಿದ ಎಸ್‌ಐಟಿ ತಂಡಕ್ಕೆ ಧನ್ಯವಾದಗಳು. ಪೋಲಿಸ್ ಅಧಿಕಾರಿಗಳಿಗೆ, ಈ ತೀರ್ಪನ್ನು ನೀಡಿರುವ ನ್ಯಾಯಮೂರ್ತಿಗಳಿಗೆ ಧನ್ಯವಾದಗಳು. ಧರ್ಮಸ್ಥಳದ ಪ್ರಕರಣದಲ್ಲೂ ಇದೇ ರೀತಿ ನ್ಯಾಯ ಗೆಲ್ಲುವಂತಾಗಲಿ ಎಂದು ಪ್ರಕಾಶ್ ರಾಜ್ ಆಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಮೇಲೆ ಭರವಸೆಯಿದೆ. ಆದರೆ ಈ ದಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ, ಸಾಕ್ಷಾಧಾರಗಳು ನಾಶವಾಗದಂತೆ, ತುರ್ತು ಕ್ರಮ ತೆಗೆದುಕೊಳ್ಳಿ. ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ಧರ್ಮಸ್ಥಳ ವಿಚಾರದಲ್ಲಿ ಇತ್ತೀಚೆಗಷ್ಟೇ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದರು.

ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ನ್ಯಾಯಾಂಗ ಎಸ್‌ಐಟಿ ತನಿಖೆಗೆ ಒತ್ತಾಯಿಸುವ ಅರ್ಜಿಗೆ ನಾನು ಸಹಿ ಹಾಕಿದ್ದೇನೆ. ಇದು ಕೇವಲ ಒಂದು ಪ್ರಕರಣವಲ್ಲ. ಈ ಪ್ರದೇಶದಲ್ಲಿ ಸರಣಿ ಹತ್ಯೆಗಳು ಮತ್ತು ಅಕ್ರಮ ಸಮಾಧಿಗಳ ಆರೋಪಗಳಿವೆ. ಆದರೆ ವರ್ಷಗಳಿಂದ ನ್ಯಾಯವನ್ನು ನಿರಾಕರಿಸಲಾಗಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನಮ್ಮ ಏಕೈಕ ಭರವಸೆಯಾಗಿದೆ. ಅದು ಅಂತಿಮವಾಗಿ ಸತ್ಯವನ್ನು ಬಹಿರಂಗಪಡಿಸುತ್ತದೆ. ನಮ್ಮ ಧ್ವನಿ ಎತ್ತೋಣ. ಪ್ರತಿ ಸಹಿ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಕರೆ ನೀಡಿದ್ದರು.
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಶವ ಹೂತಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬರು ಹೇಳಿಕೆ ದಾಖಲಿಸಿದ ಹಿನ್ನೆಲೆ ಸದ್ಯ ಧರ್ಮಸ್ಥಳದಲ್ಲಿ ಅಧಿಕಾರಿಗಳು ಹಾಗೂ ಆ ವ್ಯಕ್ತಿಯ ಸಮ್ಮುಖದಲ್ಲಿ ಸ್ಥಳಗಳನ್ನ ಗುರುತಿಸಿ, ಪರಿಶೀಲನೆ ಮಾಡುವ ಕೆಲಸ ಮುಂದುವರಿಸಿದೆ. ಆ ವ್ಯಕ್ತಿ ತೋರಿಸಿದ ಒಂದು ಸ್ಥಳದಲ್ಲಿ ಮನುಷ್ಯರ ಮೂಳೆಗಳು ಪತ್ತೆಯಾಗಿವೆ. ಇತ್ತ ಧರ್ಮಸ್ಥಳ ಪ್ರಕರಣದ ಸುದ್ದಿ ಪ್ರಸಾರಕ್ಕಿದ್ದ ನಿರ್ಬಂಧ ತೆರವು ಮಾಡಲಾಗಿದ್ದು, ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.












Click it and Unblock the Notifications