Pradeep eshwar vs Sudhakar: ನನ್ನ ವಿರುದ್ಧ ಸೇಡಿಗೆ.. ಡಾ.ಕೆ ಸುಧಾಕರ್ - ಪ್ರದೀಪ್ ಈಶ್ವರ್ ಜಟಾಪಟಿ!
ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಡಾ.ಕೆ ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ನಡುವೆ ವಾಕ್ಸಮರ, ವಾಗ್ದಾಳಿಗಳು ಮುಂದುವರಿಯುತ್ತಲ್ಲೇ ಇವೆ. ಸುಧಾಕರ್ ಗೆದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಈಶ್ವರ್ ಅವರು ಸವಾಲು ಹಾಕಿದ್ದರು. ಆದರೆ, ಸುಧಾಕರ್ ಗೆಲ್ಲುತ್ತಿದ್ದಂತೆಯೇ ಅವರು ನನ್ನ ಸವಾಲು ಸ್ವೀಕರಿಸಿರಲಿಲ್ಲ. ಸ್ವೀಕರಿಸಿದ್ದರೆ ಅಲ್ವಾ ಆ ಪ್ರಶ್ನೆ ಎಂದಿದ್ದರು. ಇನ್ನು ಸುಧಾಕರ್ ಸಂಸದರಾಗಿ ಆಯ್ಕೆಯಾದ ಮೇಲೆ ಇಬ್ಬರೂ ನಾಯಕರ ನಡುವೆ ಜಟಾಪಟಿ ಜೋರಾಗಿದೆ.
ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ಅವರ ನಡುವೆ ವಾಕ್ಸಮರ ಮುಂದಿನ ಹಂತಕ್ಕೆ ಹೋಗಿದೆ. ಕ್ಷೇತ್ರದ ಶಾಸಕರು ನನ್ನ ಕೆಲಸಗಳಿಗ ಅಡ್ಡಿಯಾಗುತ್ತಿದ್ದಾರೆ ಎಂದು ಸಂಸದ ಸುಧಾಕರ್ ಅವರು ದೂರಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ದಾಸಶ್ರೇಷ್ಠ ಕನಕದಾಸರ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಹಾಕಿಸಲಾಗಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನ ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಕಾರ್ಯಕ್ರಮಕ್ಕೆ ಮುಂಚೆಯೇ ಏಕಾಏಕಿ ತೆರವುಗೊಳಿಸಿದ್ದಾರೆ. ಅದು ಮಾತ್ರವಲ್ಲ ಬ್ಯಾನರ್‌ಗಳನ್ನು ಹರಿದು ಹಾಕಿ, ಕನಕದಾಸರಿಗೆ ಅವಮಾನ ಮಾಡಿರುವ ಘಟನೆ ಅತ್ಯಂತ ಖೇದಕರ ಎಂದು ಸುಧಾಕರ್ ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರೇ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಸಿದ್ದಾರೆ ಎಂದು ಸುಧಾಕರ್ ಅವರು ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಡಿಸಿ, ಪೌರಾಯುಕ್ತರು, ಸಬ್ ಇನ್ಸ್ಪೆಕ್ಟರ್ ಸೇರಿ ಈ ದೌರ್ಜನ್ಯ ಎಸಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕುರುಬ ಸಮಾಜದ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದು.
ಇದೇನಾ ಕಾಂಗ್ರೆಸ್ ಪಕ್ಷ ಕನಕದಾಸರಿಗೆ ಕೊಡುವ ಗೌರವವೇ, ಇದೇನಾ ಕಾಂಗ್ರೆಸ್ ಶಾಸಕರು ಹಿಂದುಳಿದ ಸಮುದಾಯಗಳಿಗೆ ನೀಡುವ ಮನ್ನಣೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಶಾಸಕರೇ, ನನ್ನ ಮೇಲಿನ ಕೋಪಕ್ಕೆ, ನನ್ನ ವಿರುದ್ಧ ಸೇಡಿಗಾಗಿ ಕನಕದಾಸರಿಗೆ ಯಾಕೆ ಅಪಮಾನ ಮಾಡುತ್ತೀರಿ ? ಕುರುಬ ಸಮಾಜದ ಭಾವನೆಗಳಿಗೆ ಯಾಕೆ ಅಗೌರವ ತೋರುತ್ತೀರಿ ಎಂದು ಕೇಳಿದ್ದಾರೆ.
ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಹಾಕಿಸಲಾಗಿದ್ದ ಫ್ಲೆಕ್ಸ್, ಬ್ಯಾನರ್ ಗಳನ್ನ ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಕಾರ್ಯಕ್ರಮಕ್ಕೆ ಮುಂಚೆಯೇ ಏಕಾಏಕಿ ತೆರವುಗೊಳಿಸಿ, ಹರಿದು ಹಾಕಿ, ಕನಕದಾಸರಿಗೆ ಅವಮಾನ ಮಾಡಿರುವ ಘಟನೆ ಅತ್ಯಂತ ಖೇದಕರ.
— Dr Sudhakar K (@DrSudhakar_) November 18, 2024
ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಡಿಸಿ, ಪೌರಾಯುಕ್ತರು, ಸಬ್… pic.twitter.com/RAqFF8C8Jx

ಕನಕ ಜಯಂತಿಯ ಬ್ಯಾನರ್ ತೆರವುಗೊಳಿಸಿ, ಹರಿದು ಹಾಕಿರುವ ಈ ದುಷ್ಕೃತ್ಯವನ್ನ ಕುರುಬ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳಿಗೆ ತಲೆಬಿಸಿ: ಶಾಸಕ ಹಾಗೂ ಸಂಸದರ ನಡುವಿನ ಜಟಾಪಟಿ ಅಧಿಕಾರಿಗಳಲ್ಲಿ ಹೊಸ ತಲೆನೋವು ಸೃಷ್ಟಿ ಮಾಡಿದೆ. ಚಿಕ್ಕಬಳ್ಳಾಪುದಲ್ಲಿ ಇಬ್ಬರು ನಾಯಕರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಲು ಅಥವಾ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸಭೆ, ಸಮಾರಂಭಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ತಿಳಿಯದೆ ಇಲ್ಲಿನ ಅಧಿಕಾರಿಗಳು ಪರದಾಡುತ್ತಿದ್ದಾರಂತೆ. ಈ ಇಬ್ಬರು ನಾಯಕರ ನಡುವೆ ಇರುವ ಮುನಿಸು ಹಾಗೂ ಗುದ್ದಾಟ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಕೋವಿಡ್ ಹಗರಣದಲ್ಲಿ ಸಂಕಷ್ಟ: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೋವಿಡ್ ಕಾಲದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಸಮಿತಿಯನ್ನು ರಚಿಸಿದ್ದು, ಈ ವಿಷಯದಲ್ಲಿ ಡಾ.ಕೆ ಸುಧಾಕರ್ ಅವರು ಸಹ ಪ್ರತಿಕ್ರಿಯಿಸಿದ್ದರು. ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ತಪ್ಪು ಸಂದೇಶ ಕೊಡುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ನಾಟಕವಾಡುತ್ತಿದೆ ಎಂದು ಸುಧಾಕರ್ ಅವರು ದೂರಿದ್ದರು.












Click it and Unblock the Notifications