ಆಗಸ್ಟ್‌ 10: ಸಚಿವ ಸೋಮಣ್ಣಗೆ ಭರ್ಜರಿ ತಿರುಗೇಟು ಕೊಟ್ಟ ಬಿಜೆಪಿ ಶಾಸಕ, ಸೇರಿದಂತೆ ರಾಜಕೀಯ ಸುದ್ದಿಗಳ ಸಮಗ್ರ ಸಂಗ್ರಹ!

ಬೆಂಗಳೂರು, ಆ. 10: ವಸತಿ ಸಚಿವ ವಿ. ಸೋಮಣ್ಣಗೆ ತಿರುಗೇಟು ಕೊಟ್ಟ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ, ಪ್ರೀತಂ ಗೌಡ ಅವರನ್ನು ಕರೆದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ಮತ್ತೆ ಬಾಯಿ ಹರಿಬಿಟ್ಟ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಶ್ರಾವಣ ಮಾಸಕ್ಕೆ ಹೊರ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷ ಆರ್. ಅಶೋಕ್, ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್ ನಾಯಕರು, ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ, ಮತ್ತೆ ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಜೆಡಿಎಸ್ ನಾಯಕರು, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಇವು ಇಂದು ಕರ್ನಾಟಕದ ರಾಜಕೀಯಕ್ಕೆ ಸಂಬಂಧಿಸಿದಂತೆ ಕಂಡು ಬಂದ ಮಹತ್ವದ ಬೆಳವಣಿಗೆಗಳು.

ಮೊದಲಿಗೆ ಓದೋಣ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟುತ್ತಿರುವ ಬಿಜೆಪಿ ನಾಯಕರ ಕುರಿತು ಪಕ್ಷದಲ್ಲಿಯೇ ಎದ್ದಿರುವ ಅಸಮಾಧಾನದ ಕುರಿತು ಸುದ್ದಿಯನ್ನು.

ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್.ಡಿ. ದೇವೇಗೌಡ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದನ್ನು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ತೀವ್ರವಾಗಿ ಆಕ್ಷೇಪಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ. ಸೋಮಣ್ಣ ಪ್ರೀತಂ ಗೌಡಗೆ ಬುದ್ದಿ ಹೇಳಿದ್ದರು. ಇದೇ ವಿಚಾರ ಇವತ್ತು ಮತ್ತೆ ಬಿಜೆಪಿಯಲ್ಲಿ ಚರ್ಚೆಗೆ ಬಂದಿದೆ. ತಮ್ಮ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಕುರಿತು ಸ್ಪಷ್ಟನೆ ಕೊಡಲು ಶಾಸಕ ಪ್ರೀತಂ ಗೌಡ ಅವರನ್ನು ಕರೆಯಿಸಿದ್ದರು. ಸಿಎಂ ಭೇಟಿ ಬಳಿಕ ಶಾಸಕ ಪ್ರೀತಂ ಗೌಡ ಸಚಿವ ವಿ. ಸೋಮಣ್ಣ ಅವರ ಮೇಲೆ ಹರಿಹಾಯ್ದಿದ್ದಾರೆ.

Karnataka Political News Roundup 10th August 2021 Politicians News today

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ್ದ ಸಚಿವ ವಿ. ಸೋಮಣ್ಣ, "ಶಾಸಕ ಪ್ರೀತಂ ಗೌಡ ಇತಿಮಿತಿಯಲ್ಲಿ ನೋಡಬೇಕು. ಒಂದು ಸಾರಿ ಎಂಎಲ್ಎ ಆದ ತಕ್ಷಣಕ್ಕೆ ದೇವರಲ್ಲ. ನಾನು ಸಚಿವನಾಗಿದ್ದಾಗ ಪ್ರೀತಂ ಗೌಡ ಹುಟ್ಟಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ 50 ವರ್ಷಗಳ ರಾಜಕೀಯ ಇತಿಹಾಸವಿದೆ. ಅವರು ರಾಷ್ಟ್ರದ ಪ್ರಧಾನಿಗಳಾಗಿದ್ದವರು. ನಾನು ಕೂಡ ದೇವೇಗೌಡರ ಮನೆಗೆ ಹೋಗಿದ್ದೆ" ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಸಿಎಂ ಭೇಟಿ ಬಳಿಕ ಶಾಸಕ ತಿರುಗೇಟು ಕೊಟ್ಟಿದ್ದು ಹೀಗೆ.

"ನನ್ನ ನಿಲುವು ಬದಲಾಗಿಲ್ಲ. ನಾನು ಪ್ರಶ್ನೆ ಮಾಡಿದ್ದು ನೂರಕ್ಕೆ‌ ನೂರು‌ ಸತ್ಯ. ಒಂದು ಸಾರಿ ಗೆದ್ದರೇನೆ ಐದು ಬಾರಿ ಗೆಲ್ಲೋದು. ಮೊದಲು ಗೆದ್ದವರಿಗೂ ಒಂದೇ ವೋಟು. ಆರು ಬಾರಿ ಗೆದ್ದವರಿಗೂ ಒಂದೇ ವೋಟು. ನಾನು ರಾಜಕಾರಣ ಮಾಡೋಕೇ ಬಂದವನು. ಇಲ್ಲಿಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ನೋಡೋಕೆ ಬಂದವನಲ್ಲ. ಮಾತನಾಡಬೇಕಾದರೆ ಗೌರವ ಕೊಟ್ಟು ಗೌರವ ಪಡೆಯಬೇಕು. ಅವರು ಹಿರಿಯರಾದರೆ ಮಾರ್ಗದರ್ಶನ ಮಾಡಲಿ. ಅದು ಬಿಟ್ಟು ಅವರು ಹೇಳಿದ್ದನ್ನು ಕೇಳಲೇಬೇಕೆಂಬುದು ಸರಿಯಲ್ಲ. ನನಗೆ ಹೇಗೆ ಗೆಲ್ಲಬೇಕೆಂದು ಗೊತ್ತಿದೆ. ಇದನ್ನ ಅರ್ಥ ಮಾಡಿಕೊಂಡರೆ ಸಾಕು" ಎಂದು ಸಚಿವ ವಿ. ಸೋಮಣ್ಣಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು.

Karnataka Political News Roundup 10th August 2021 Politicians News today

ಇನ್ನು ಶಾಸಕ ಪ್ರೀತಂ ಗೌಡ ಭೇಟಿ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, "ನೀವೇ ಹೇಳಿದ್ರಲ್ಲ ಅವರು ಮೊದಲ ಬಾರಿ ಶಾಸಕ. ಅವರು ನನ್ನ ಯುವ ಮಿತ್ರ. ಅವರನ್ನು ಕರೆದು ಮಾತನಾಡಿದ್ದೇನೆ. ಸಂಘಕ್ಕೆ ದೂರು ನೀಡಲು ಎಲ್ಲರೂ ಸರ್ವ ಸ್ವತಂತ್ರರು. ಮಾತುಕತೆಯಲ್ಲಿ ನಂಬಿಕೆ ಇಟ್ಟವನು ನಾನು. ಮಾತನಾಡಿದರೆ ಎಲ್ಲವೂ ಬಗೆ ಹರಿಯುತ್ತದೆ. ಈ ನಂಬಿಕೆ ನನಗಿದೆ" ಎಂದು ಪ್ರತಿಕ್ರಿಯೆ ನೀಡಿದರು.

ಇನ್ನು ವಿಧಾನಸೌಧದಲ್ಲಿ ಮಾನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದರು. ಈಶ್ವರಪ್ಪ ಜೋಕರ್ ಎಂದು ಹೆಸರು ಬದಲಿಸಿಕೊಳ್ಳಬೇಕೆಂಬ ಕಾಂಗ್ರೆಸ್ ನಾಯಕರು ಹೇಳಿದ್ದರು. ಅದಕ್ಕೆ ತಿರುಗೇಟು ಕೊಡಲು ಭರದಲ್ಲಿ ಸಚಿವ ಈಶ್ವರಪ್ಪ ಅವರು, ಯಾರೋ ಹೇಳ್ತಾರೆ, ಹೇಳಲಿ ಬಿಡಿ. ಒಂದು ಕಾಲದಲ್ಲಿ ಜನಸಂಘದಲ್ಲಿ ಶಕ್ತಿ ಇರಲಿಲ್ಲ. ರೈಲ್ವೇ ಫ್ಲಾಟ್ ಫಾರ್ಮ್‌ನಲ್ಲಿ ಕೊಲೆ ಮಾಡಿ ಹಾಕಿದ್ದ ಕಾಲವಿತ್ತು. ಆಗ ನಮಗೆ ಶಕ್ತಿ ಇರಲಿಲ್ಲ. ಆಗ ಏನೇ ಆದ್ರೂ ಸುಮ್ಮನಿರಿ ಎಂದು ಹಿರಿಯರು ಹೇಳಿದ್ದರು. ಆದರೀಗ ನಮಗೆ ಶಕ್ತಿ ಬಂದಿದೆ. ನಾವು ಯಾರ ತಂಟೆಗೆ ಹೋಗೋದು ಬೇಡ. ನಮ್ಮ ತಂಟೆಗೆ ಬಂದರೆ ಸುಮ್ನಿರೋದು ಬೇಡ. ಹೀಗಂತ ನಮ್ಮ‌ ಹಿರಿಯರು‌ ಹೇಳಿದ್ದಾರೆ. ಅದನ್ನ ನಾನು ಉಲ್ಲೇಖ ಮಾಡಿದ್ದೇನೆ ಅಷ್ಟೇ. ಇದನ್ನು ವಿವಾದ ಮಾಡೋದು ಸರಿಯಲ್ಲ. ಇಲ್ಲಿಗೆ ನಿಲ್ಲಿಸೋಣ, ಮುಂದುವರೆಸೋದು ಬೇಡ" ಎಂದು ಹೇಳಿದರು.

Karnataka Political News Roundup 10th August 2021 Politicians News today

ಇನ್ನು ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳ ಬಗ್ಗೆ ಪ್ರತಿಕ್ರಿಯೆನ ಕೊಟ್ಟಿರುವ ಕಂದಾಯ ಸಚಿವರೂ ಆಗಿರುವ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಪ್ರಾಧಿಕಾರದ ಆಧ್ಯಕ್ಷ ಆರ್. ಅಶೋಕ್, "ಹಿಂದೂಗಳಿಗೆ ಶ್ರಾವಣ ಸೋಮವಾರ ಪವಿತ್ರದ ದಿನ. ಸಾಲು ಸಾಲು ಹಬ್ಬಗಳು ಬರುತ್ತಿವೆ. ದೇಗುಲಗಳಲ್ಲಿ ಹೇಗಿರಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ತರುವ ಬಗ್ಗೆ ಚಿಂತನೆ ನಡೆದಿದೆ. ಅಮೆರಿಕಾದಲ್ಲಿ ಕೊವಿಡ್ 3ನೇ ಅಲೆ ಅಬ್ಬರಿಸುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ. ಇನ್ನು ರಾಜ್ಯದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಕಳೆದೆರಡು ದಿನಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಹಾಗೂ ಗೃಹ ಸಚಿವರು ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ. ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ತೆಗೆದು ಕೊಂಡಿದ್ದರು. ಮಂಗಳವಾರ ಹಿಂದಿನ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹಲವು ಖಡಕ್ ಸೂಚನೆಗಳನ್ನು ಪೊಲೀಸ್ ಇಲಾಖೆಗೆ ಸಿಎಂ ಬೊಮ್ಮಾಯಿ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅಷ್ಟಕ್ಕೂ ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರ ನಿರಂತರ ಸಭೆ ಮಾಡುತ್ತಿರುವುದರ ಹಿಂದೆ ಮಹತ್ವದ ಕಾರಣವಿದೆ ಎನ್ನಲಾಗುತ್ತಿದೆ.

Karnataka Political News Roundup 10th August 2021 Politicians News today

ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಹಿಂದೆ ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆ ಆಗಿತ್ತು. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ, ಬಳಿಕ ಮೈತ್ರಿ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರದ ಆಡಳಿತ ಸಂದರ್ಭದಲ್ಲಿ ಈ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ. ಆಫ್ರಿಕಾದ ದೇಶಗಳಿಂದ ಶಿಕ್ಷಣ ಹಾಗೂ ಉದ್ಯೋಗಕ್ಕೆಂದು ಬಂದವರು ಇಲ್ಲಿಯೆ ಉಳಿಯುತ್ತಿದ್ದಾರೆ. ಅವರು ಡ್ರಗ್ಸ್‌ ದಂಧೆಯಲ್ಲಿ ಪಾಲುದಾರರಾಗುತ್ತಿದ್ದಾರೆ. ಈ ಹಿಂದೆ ಉತ್ತರ ಕರ್ನಾಟಕದ ಧಾರವಾಡದಲ್ಲಿ ಶಿಕ್ಷಣಕ್ಕಾಗಿ ದಕ್ಷಿಣ ಆಫ್ರಿಕಾ, ಕೇನ್ಯಾ ಸೇರಿದಂತೆ ಆಫ್ರಿಕಾ ಖಂಡದಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಅವರಲ್ಲಿ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣ ಮುಗಿದ ಬಳಿಕವೂ ಹಲವರು ಇಲ್ಲಿಯೇ ಉಳಿಯುತ್ತಿದ್ದಾರೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಸಿಕ್ಕಿದೆ.

ಇತ್ತೀಚಿಗಷ್ಟೆ ಪೊಲೀಸರ ವಶದಲ್ಲಿದ್ದ ಕಾಂಗೋ ದೇಶದ ಪ್ರಜೆಯೊಬ್ಬ ಮೃತಪಟ್ಟಿದ್ದ. ಆತನು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆಂದು ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಡಗ್ಸ್‌ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳ ಪ್ರಮಾಣ ಕಳೆದ ಎರಡೂವರೆ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಗೃಹ ಇಲಾಖೆ ವರದಿ ಹೇಳುತ್ತಿದೆ. ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕದಿದ್ದರೆ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬ್ರಾಂಡ್ ಹೆಸರು ಹಾಳಾಗುವುದು ಖಚಿತ. ಹಾಗಾಗದಂತೆ ತಡೆಯಲು ರಾಜ್ಯ ಸರ್ಕಾರ ಖಡಕ್ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಅದಕ್ಕಾಗಿಯೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಸಿಎಂ ಹಾಗೂ ಗೃಹ ಸಚಿವರು ಮಾಡಿದ್ದಾರೆ ಎಂಬ ಮಾಹಿತಿಯಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಹೇಳಿಕೆ ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಕಾಂಗ್ರೆಸಿಗರ ವಿರುದ್ಧ ಸಚಿವ ಈಶ್ವರಪ್ಪ ಅವರ ಅವಾಚ್ಯದ ನುಡಿಗಳು ಬಿಜೆಪಿ ಪಕ್ಷದ ನೀಚ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅವರ ಹೇಳಿಕೆಗೆ ಮುಖ್ಯಮಂತ್ರಿಗಳಿಂದ ಉತ್ತರ ಎದುರು ನೋಡುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

'ಈಶ್ವರಪ್ಪ ಅವರ ಹೇಳಿಕೆ ಬಿಜೆಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಡೀ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇವೆ ಎಂದು ಪ್ರತಿಜ್ಞೆ ಮಾಡಿ, ಅದಕ್ಕೆ ಬದ್ಧರಾಗಿರದೇ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಈ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದಾರೆ. ಅವರ ಹೇಳಿಕೆಗೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತಾನೆ. ಈಶ್ವರಪ್ಪ ಅವರ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ನೀಡಲಿ. ಆನಂತರ ನಮ್ಮ ಪ್ರತಿಕ್ರಿಯೆ ನೀಡುತ್ತೇವೆ.' ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜೆಡಿಎಸ್ ನಾಯಕರು ಭೇಟಿ ಮಾಡಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ಭೇಟಿ ಮಾಡಿದರು. ಮಾಜಿ ಸಚಿವರಾದ ಡಿ ಸಿ ತಮ್ಮಣ್ಣ, ಸಿ ಎಸ್ ಪುಟ್ಟರಾಜು, ಸುರೇಶ್ ಗೌಡ, ಶ್ರೀಕಂಠೇಗೌಡ, ಶ್ರೀನಿವಾಸ್ ಸೇರಿಂದಂತೆ ಹಲವು ಜೆಡಿಎಸ್ ನಾಯಕರು ಅಭಿನಂದನೆ ಸಲ್ಲಿಸಿ ತಮ್ಮ ಕ್ಷೇತ್ರದ ಬೇಡಿಕೆಗಳನ್ನು ವಿವರಿಸಿದರು.

Recommended Video

      ನಾನೇನ್ ಭ್ರಷ್ಟನಾ? ನಿಂಗೆ ಇದೇ ಖಾತೆ ಲಾಯಕ್ ಅಂತ ಹೇಳ್ಲಿ ನೋಡೋಣ | oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+