ಸೂರ್ಯ ಘರ್ ಬಿಜಲಿ ಯೋಜನೆ: ಸಹಾಯಧನ, ನೋಂದಣಿ ಶುಲ್ಕದ ವಿವರಗಳು
ಬೆಂಗಳೂರು, ಡಿಸೆಂಬರ್ 11: ಕೇಂದ್ರ ಸರ್ಕಾರ ಸೌರಶಕ್ತಿ ಬಳಕೆ ಮಾಡಲು ಉತ್ತೇಜನವನ್ನು ನೀಡುತ್ತಿದೆ. ಇದಕ್ಕಾಗಿ ವಿವಿಧ ಯೋಜನೆಗಳನ್ನು ಸಹ ಜಾರಿಗೊಳಿಸುತ್ತಿದೆ. 'ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ' ಸಹ ಈ ನಿಟ್ಟಿನಲ್ಲಿ ಕೈಗೊಂಡ ಕೇಂದ್ರೀಯ ಯೋಜನೆಯಾಗಿದೆ. ಮನೆಯ ಮೇಲೆ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿ, 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ. ಯೋಜನೆಯಡಿ ಜನರು ತಮ್ಮ ಮನೆಯಲ್ಲಿ ಉತ್ಪಾದನೆಯಾದ ವಿದ್ಯುತ್ ಮಾರಾಟ ಮಾಡಲು ಸಹ ಅವಕಾಶವಿದೆ.
'ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ'ಗೆ ಸುಲಭವಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಶುಲ್ಕ ಪಾವತಿ ಮಾಡಿ, ನೋಂದಣಿಯಾದ ಜನರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳಿಗೆ ತಮ್ಮ ಗೃಹ ಬಳಕೆಗಿಂತ ಹೆಚ್ಚುವರಿಯಾಗಿ ಉಳಿಯುವ ವಿದ್ಯುತ್ ಅನ್ನು ಮಾರಾಟ ಮಾಡಬಹುದು.

ಯೋಜನೆ ನೋಂದಣಿ ಶುಲ್ಕ, ವಿವರಗಳು: 'ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ'ಯನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಫೆಬ್ರವರಿ 29 ರಂದು ಅನುಮೋದಿಸಲಾಯಿತು. ಯೋಜನೆಯಡಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. 75,021 ಕೋಟಿ ರೂ.ಗಳ ವೆಚ್ಚದೊಂದಿಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಮನೆಯ ಮೇಲೆ ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆ ರೂಪಿಸಿದೆ, ಬೆಸ್ಕಾಂ ವ್ಯಾಪ್ತಿಯ ಜನರು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಗ್ರಾಹಕರು ಯೋಜನೆಗೆ ಹೆಸರು ನೋಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60 ರಷ್ಟನ್ನು ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ.
1 ಕಿಲೋವ್ಯಾಟ್‍ಗೆ ರೂ. 30 ಸಾವಿರ ರೂಪಾಯಿ, 2 ಕಿಲೋವ್ಯಾಟ್‍ಗೆ ರೂ. 60 ಸಾವಿರ ರೂಪಾಯಿ ಮತ್ತು 3 ಕಿಲೋವ್ಯಾಟ್‍ಗೆ ರೂ. 78 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಜನರು ತಮಗೆ ಸಾಕಾಗುವಷ್ಟು ವಿದ್ಯುತ್ ಬಳಸಿದ ಮೇಲೆ ಉಳಿಯುವ ವಿದ್ಯುತ್ ಅನ್ನು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗೆ ಮಾರಾಟ ಮಾಡಲು ಅವಕಾಶವಿದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಎಲ್ಲಾ ವರ್ಗದ ಗ್ರಾಹಕರು ನೋಂದಣಿ ಮಾಡಿಕೊಳ್ಳಬಹುದು. ಮನೆ ಆರ್‌ಸಿಸಿ ಹೊಂದಿದ್ದು, ಕನಿಷ್ಠ 10/10 ಸ್ಥಳಾವಕಾಶ ಇದ್ದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.
ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆಗೆ ಹೆಸರು ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋಟೋದೊಂದಿಗೆ pmsuryaghar.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಶುಲ್ಕ ರೂ. 1500 ಆಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಮಾನದಂಡ: ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು, ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರಬೇಕು. ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು ಮತ್ತು ಮನೆಯವರು ಸೋಲಾರ್ ಪ್ಯಾನೆಲ್‌ಗಳಿಗೆ ಬೇರೆ ಯಾವುದೇ ಸಬ್ಸಿಡಿ ಪಡೆದಿರಬಾರದು.
ಮನೆಗಳು ವಿದ್ಯುತ್ ಬಿಲ್ ಉಳಿಸಲು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಈ ಯೋಜನೆ ಸಹಾಯಕವಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲೀ ಯೋಜನೆಯು 3 kw ಸಾಮರ್ಥ್ಯದ ರೂಫ್ ಟಾಪ್ ಸೋಲಾರ್ ಘಟಕವನ್ನು ಸ್ಥಾಪಿಸುವ ಮೂಲಕ ತಿಂಗಳಿಗೆ 300 ಯೂನಿಟ್‌ಗಳವರೆಗೆ ಬಳಕೆ ಮಾಡುವ ಕುಟುಂಬಕ್ಕೆ ಒಂದು ವರ್ಷದಲ್ಲಿ ಅಂದಾಜು 15,000 ರೂ.ಗಳ ಬಿಲ್ ಉಳಿತಾಯದ ಭರವಸೆಯನ್ನು ನೀಡುತ್ತದೆ.












Click it and Unblock the Notifications