Namma Metro: ಪ್ರಯಾಣಿಕರಿಗೆ ಗುಡ್‌ನ್ಯೂಸ್; ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಎಲ್ಲಿಂದ ಎಲ್ಲಿಗೆ?
ಬೆಂಗಳೂರು, ಆಗಸ್ಟ್ 05: ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಹಲವು ವರ್ಷಗಳಿಂದ ಕಾಯುತ್ತಿದ್ದ ಬೆಂಗಳೂರು ದಕ್ಷಿಣ ಭಾಗದ ಜನರ ಕನಸು ಕೊನೆಗೂ ನನಸಾಗುವ ಕಾಲ ಕೂಡಿ ಬಂದಿದೆ. ಆಗಸ್ಟ್ 10ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ ಪ್ರಧಾನಿ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಮಂಗಳವಾರ ಸಂಚರಿಸಿ ಪರಿಶೀಲನೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, 7,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಲೋಮೀಟರ್ ಉದ್ದದ, 16 ನಿಲ್ದಾಣಗಳಿರುವ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆಗಸ್ಟ್10ರಂದು ಐಐಎಂಬಿಯಲ್ಲಿ ಇರುವ ಸಭಾಂಗಣದಲ್ಲಿ ಚಿಕ್ಕ, ಚೊಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮೆಟ್ರೋ ರೈಲಿನಲ್ಲಿ ಪ್ರಧಾನಿಯವರು, ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು ಅಂದು ಪ್ರಯಾಣ ಮಾಡಲಿದ್ದಾರೆ. ಇದೇ ವೇಳೆ ಡಬಲ್ ಡೆಕ್ಕರ್ ಯೋಜನೆ ಭೂಸ್ವಾಧೀನಕ್ಕೆ ಒಂದಷ್ಟು ಅನುದಾನದ ಕೊರತೆಯಿದೆ. ಇದರ ಬಗ್ಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಈ ವೇಳೆ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಿಗದಿ ಮಾಡಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಮೆಟ್ರೋ ಯೋಜನೆ ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆ ಇದೆ. ಇದರಲ್ಲಿ ಜನರ ಸೇವೆ ಮುಖ್ಯವೇ ಹೊರತು, ಕ್ರೆಡಿಟ್ ರಾಜಕಾರಣವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಇದು ನಮ್ಮ ಮೆಟ್ರೋ. ಮುಖ್ಯಮಂತ್ರಿಯವರು ಹಾಗೂ ನಾನು ಉದ್ಘಾಟನೆ ಮಾಡಿ ಎಂದು ಪ್ರಧಾನಿಗಳ ಬಳಿ ಮನವಿ ಮಾಡಿದ್ದೆವು. ಈಗ ಸಮಯ ನೀಡಿದ್ದಾರೆ. ಇದು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಶೇ.50 ರಷ್ಟು ಪಾಲನ್ನು ಹೊಂದಿವೆ. ಅವರ ಕಡೆಯಿಂದ ಅಧ್ಯಕ್ಷರಿದ್ದರೆ ನಮ್ಮ ಕಡೆಯಿಂದ ವ್ಯವಸ್ಥಾಪಕ ನಿರ್ದೇಶಕರು ಇರುತ್ತಾರೆ. ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು, ನಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದ್ದೇವೆ ಎಂದು ಹೇಳಿದರು.
ಹಳದಿ ಮಾರ್ಗಕ್ಕೆ ಈಗ ಮೂರು ರೈಲುಗಳು ಬಂದಿವೆ. ನಾಲ್ಕನೇ ರೈಲು ಆಗಸ್ಟ್ ತಿಂಗಳಲ್ಲಿಯೇ ಬರುತ್ತದೆ. ಇದರ ಕಾರ್ಯಾಚರಣೆ ನಡೆಸಲು ಒಂದು ವಾರಗಳ ಸಮಯ ಬೇಕಾಗುತ್ತದೆ. ಪ್ರಸ್ತುತ ಮೂರು ರೈಲುಗಳು ಕಾರ್ಯಚರಣೆ ಮಾಡುತ್ತವೆ. ಈಗ ಮೆಟ್ರೋ ರೈಲು ಕಡಿಮೆ ಇರುವ ಕಾರಣಕ್ಕೆ 25 ನಿಮಿಷಗಳಿಗೊಂದು ಕಾರ್ಯಾಚರಣೆ ಮಾಡುತ್ತವೆ. ನಂತರ 20 ನಿಮಿಷ ನಂತರ ಕಡಿಮೆ ಮಾಡಲಾಗುವುದು. ಮುಂದೆ ರೈಲುಗಳು ಹೆಚ್ಚು ಬಂದಂತೆ ಹಂತ ಹಂತವಾಗಿ 10 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ವ್ಯವಸ್ಥೆ ಕ್ಲಪಿಸಲಾಗುವುದು ಎಂದು ಹೇಳಿದರು. ಈ ಮಾರ್ಗ ಮಹದೇವಪುರ ಸೇರಿದಂತೆ ಐಟಿ ವಲಯಕ್ಕೆ ಸಂಪರ್ಕ ಕೊಂಡಿಯಾಗಲಿದೆ. ನಗರದ ಯಾವ ಭಾಗದಿಂದ ಬೇಕಾದರು ಇಲ್ಲಿಗೆ ಸಂಚಾರ ದಟ್ಟಣೆ ಇಲ್ಲದೆ ಬರಬಹುದು ಎಂದು ಹೇಳಿದರು.
ಮೆಟ್ರೋ ಮಾರ್ಗ ವಿಸ್ತರಣೆ ಹಾಗೂ ಡಬಲ್ ಡೆಕ್ಕರ್ ಬಗ್ಗೆ ಮಾತನಾಡಿ, ಈಗ ಗಲಾಟೆ ಮಾಡುತ್ತಿರುವ ಸಂಸದರುಗಳು ಒಂದಷ್ಟು ಅನುದಾನ ಕೊಡಿಸಿದರೆ ಬೆಂಗಳೂರಿಗೆ ಬಹಳ ಒಳ್ಳೆಯದು. ಒಬ್ಬರೂ ಸಹ ಅನುದಾನದ ಬಗ್ಗೆ ಮಾತನಾಡುವುದಿಲ್ಲ. ಬರೀ ತಪ್ಪು ಕಂಡುಹಿಡಿದು ಮಾತನಾಡುತ್ತಾರೆ. ನಗರದಲ್ಲಿ ಮುಂದಕ್ಕೆ ಎಲ್ಲೇ ಮೆಟ್ರೋ ಮಾರ್ಗ ನಿರ್ಮಾಣ ಮಾಡಿದರು ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಇದಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು. ಕಟ್ಟಡಗಳನ್ನು ಕೆಡವಿದರೆ ಹೆಚ್ಚು ಪರಹಾರ ನೀಡಬೇಕಾಗುತ್ತದೆ. ಇದನ್ನು ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ಎರಡೂ ಸೇರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ಬಿಜೆಪಿಯ ಸಂಸದರಿಗೆ ತಿವಿದರು.












Click it and Unblock the Notifications