ಕರ್ನಾಟಕಕ್ಕೆ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಸಿದ್ಧ: ಕಾಂಗ್ರೆಸ್ ಸರ್ಕಾರಕ್ಕೆ ಕೋಟಿ ಕೋಟಿ ರೂ. ಉಳಿತಾಯ
ಹುಬ್ಬಳ್ಳಿ, ಜನವರಿ 20: ದೇಶದ ಜನರಿಗೆ ಅನುಕೂಲವಾಗುವ ಸದುದ್ದೇಶದಿಂದ 05 ಕೆ.ಜಿ. ಅಕ್ಕಿ ನೀಡುತ್ತಿರುವ ಕೇಂದ್ರ ಸರ್ಕಾರವು, ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ದಾಸ್ತಾನು ಹೊಂದಿದೆ. ಹೀಗಾಗಿ ಕರ್ನಾಟಕಕ್ಕೆ ಮೊದಲಿಗಿಂತಲೂ ಕಡಿಮೆ ದರದಲ್ಲಿ ಅಕ್ಕಿ ನೀಡಲು ಸಿದ್ಧವಿದೆ. ಪೂರೈಕೆ ಆದರೆ ಕರ್ನಾಟಕ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವಿತರಣೆ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅಪಾರ ಅಕ್ಕಿ ಸಂಗ್ರಹವಿದೆ. ಮೊದಲು ಪ್ರತಿ ಕೆ.ಜಿ.ಗೆ 28 ರೂಪಾಯಿಗೆ ಒದಗಿಸುತ್ತಿದ್ದ ಅಕ್ಕಿಯನ್ನು ಸದ್ಯ ಕಡಿಮೆ ಬೆಲೆಗೆ ರೂ.22.50ಕ್ಕೆ ಕರ್ನಾಟಕಕ್ಕೆ ಒದಗಿಸಲು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದರು.

ಮೊದಲು ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದಿದ್ದ ಇದೇ ರಾಜ್ಯ ಸರ್ಕಾರ ಇದೀಗ ಅಕ್ಕಿ ಖರೀದಿಸಿ ನೀಡಬಹುದಾಗಿದೆ. ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುವ ಅಕ್ಕಿ ದರವನ್ನು ಕೇಂದ್ರ ಸರ್ಕಾರ ಕಡಿತ ಮಾಡಿದ್ದು, ಸಾಗಣೆ ವೆಚ್ಚ ಸೇರಿ ಪ್ರತಿ ಕೆಜಿಗೆ 22.50 ರೂ. ದರದಲ್ಲಿ ಪೂರೈಕೆ ಮಾಡಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಕ್ಕಿ ಬೇಕು ಎಂಬ ಬೇಡಿಕೆ ಕೇಂದ್ರಕ್ಕೆ ಬಂದಿಲ್ಲ ಎಂದರು.
ಕೇಂದ್ರದಿಂದ ಪ್ರತಿ ಕೆ.ಜಿ.ಗೆ 22.50 ರೂ. ದರದಲ್ಲಿ ಅಕ್ಕಿ ಖರೀದಿಸಿದರೆ ಕರ್ನಾಟಕ ಸರ್ಕಾರಕ್ಕೆ ವಾರ್ಷಿಕ 2280 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಅಂದರೆ ಮಾಸಿಕವಾಗಿ ರಾಜ್ಯ ಸರ್ಕಾರಕ್ಕೆ ಮಾಸಿಕ 190 ಕೋಟಿ ರೂಪಾಯಿ ಉಳಿತಾಯವಾಗಲಿದೆ.
ಕೇಂದ್ರ ಸರ್ಕಾರ ಪಡಿತರದಾರರಿಗೆ ಉಚಿತವಾಗಿ ಮಾಸಿಕ 5 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಭರವಸೆ ನೀಡಿದಂತೆ ಉಳಿದ 5 ಕೆಜಿ ಅಕ್ಕಿಯ ಬದಲು ಹಣ (ಪ್ರತಿ ಕೆಜಿಗೆ 34 ರೂ.ನಂತೆ) ನೀಡುತ್ತಿದೆ. ಹಣ ನೀಡುವ ಬದಲು ಕೇಂದ್ರದಿಂದ ಪ್ರತಿ ಕೆಜಿಗೆ 22.50 ರೂ. ನಂತೆ ಅಕ್ಕಿ ಖರೀದಿಸಿದರೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವರು ವಿವರಿಸಿದರು.
ಈ ಹಿಂದೆ ವಿವಿಧ ಕಾರಣಗಳಿಂದ ಭಾರತ ಮತ್ತು ಅನ್ಯ ದೇಶಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿದ್ದವು. ಹಾಗಾಗಿ ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಉತ್ಪಾದನೆ ಹೆಚ್ಚಿದ್ದು, ಖರೀದಿ ಮಾಡಲು ರಾಜ್ಯ ಸರ್ಕಾರವನ್ನು ಕೋರುತ್ತಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ಈ ಹಿಂದೆ FCIನಲ್ಲಿ ಅಕ್ಕಿ ಸಂಗ್ರಹ ಇಲ್ಲದಾಗ FCI ದರದಲ್ಲಿ ಅಕ್ಕಿ ನೀಡಿದರೆ ಖರೀದಿಗೆ ಸಿದ್ಧ ಎಂದು ಹೇಳಿತ್ತು. ಸದ್ಯ ರಾಜ್ಯಕ್ಕೆ ಆಗುವಷ್ಟು ಅಕ್ಕಿ ದಾಸ್ತಾನು ಕೇಂದ್ರದಲ್ಲಿದ್ದರೂ, ಕಡಿಮೆ ಬೆಲೆಗೆ ನೀಡುವುದಾಗಿ ತಿಳಿಸಿದರೂ ಈ ಬಗ್ಗೆ ರಾಜ್ಯ ಸರ್ಕಾರ ಮೌನ ವಹಿಸಿದೆ. ಬೇಡಿಕೆ ಇಡುತ್ತಿಲ್ಲ.
ರಾಜ್ಯ ಸರ್ಕಾರ ಜನರಿಗೆ ಹತ್ತು ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ ಇದುವರೆಗೂ 10 ಕೆ.ಜಿ. ಅಕ್ಕಿಗೆ ಬದಲಾಗಿ ಕೇವಲ 05 ಕೆ.ಜಿ. ಅಕ್ಕಿ ಮಾತ್ರವನ್ನೇ ನೀಡುತ್ತಿದೆ. ಕೇಂದ್ರದಲ್ಲಿ ಅಕ್ಕಿ ಸಂಗ್ರಹವಿಲ್ಲದಾಗ ಕೇಂದ್ರದತ್ತ ಬೊಟ್ಟು ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಸುಮ್ಮನಿದ್ದಾರೆ ಎಂದರು.
ಅಂಬೇಡ್ಕರ್ ವಿಚಾರ: ಕಾಂಗ್ರೆಸ್ ನಾಯಕರು ಕ್ಷಮೆ ಕೇಳ್ತಾರಾ?
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ ಸೋಲಿಸಿತ್ತು. ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ನೀಡಿರಲಿಲ್ಲ. ಹೀಗೆ ಅನೇಕ ರೀತಿಯಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಕ್ಕೆ ತಮ್ಮ ಪೂರ್ವಜರ ಪರವಾಗಿ ಇಂದಿನ ಕಾಂಗ್ರೆಸ್ ನಾಯಕರು ಕ್ಷಮೆ ಕೇಳುತ್ತಾರಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಬೆಳಗಾವಿಯ ಗಾಂಧಿ ಬಾವಿಯ ನೀರನ್ನು ತೆಗೆದು ಬಿಜೆಪಿಯನ್ನು ಸ್ವಚ್ಛ ಮಾಡುತ್ತೇವೆ ಎಂಬ ಕೆಪಿಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದರು. ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಸ್ವಚ್ಛ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನಸ್ಥಿತಿಯನ್ನು ಸ್ವಚ್ಛ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಡಿಸಿಎಂಗೆ ಕೇಂದ್ರ ಸಚಿವರು ತಿರುಗೇಟು ನೀಡಿದರು.












Click it and Unblock the Notifications