ಆರ್‌ಟಿಇ ಮಕ್ಕಳ ಪೋಷಕರು ಪುಸ್ತಕ, ಸಮವಸ್ತ್ರ ಕೊಳ್ಳಲು ಸ್ವತಂತ್ರರು!
ಬೆಂಗಳೂರು, ಮೇ.3: ಅನುದಾನರಹಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಪುಸ್ತಕ, ಸಮವಸ್ತ್ರಗಳನ್ನು ನಿರ್ದಿಷ್ಟ ಮಾರಾಟಗಾರರಿಂದ ಖರೀದಿಸುವಂತೆ ಪಾಲಕರ ಮೇಲೆ ಒತ್ತಡ ಹೇರಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿ, ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ, ಸಹಪಠ್ಯ ಚಟುವಟಿಕೆ ಮತ್ತು ಕ್ರೀಡೆಗಳಿಗೆ ಸುಮಾರು 20 ಸಾವಿರ ರೂ.ಗಳಿಂದ 30 ಸಾವಿರ ರೂ.ಗಳವರೆಗೆ ಒಂದೇ ಕಂತಿನಲ್ಲಿ ಶುಲ್ಕ ಪಾವತಿಸಲು ಮಕ್ಕಳ ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ಶಿಕ್ಷಣ ಹಕ್ಕು ಕಾಯ್ದೆ ನಿಯಮ ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾ ಪಂಚಾಯ್ತಿ ಸಿಇಒಗಳು ಶಿಸ್ತಿನ ಪ್ರಾಧಿಕಾರವಾಗಿರುತ್ತಾರೆ. ದೂರು ಕಂಡುಬಂದಲ್ಲಿ ಇಲಾಖಾ ಅಧಿಕಾರಿಗಳು ವರದಿ ಸಲ್ಲಿಸಬೇಕು. ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಜತೆಜತೆಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ಸಂಬಂಧಪಟ್ಟ ಶಾಲೆಗಳೇ ಭರಿಸಬೇಕು ಎಂಬ ಸರ್ಕಾರದ ಆದೇಶವನ್ನು ಖಾಸಗಿ ಶಾಲೆಗಳು ತಳ್ಳಿ ಹಾಕಿವೆ. ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಖಾಸಗಿ ಶಾಲೆಗಳು ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿವೆ.
ಕರ್ನಾಟಕ ಹೈಕೋರ್ಟ್ ಆರ್‌ಟಿಇ ಮತ್ತು ಸಾಮಾನ್ಯ ವಿದ್ಯಾರ್ಥಿಗಳ ನಡುವೆ ಯಾವುದೇ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸದೆ ಸಮಾನವಾಗಿ ಕಾಣಬೇಕು ಎಂದು ಹೇಳಿದೆಯೇ ಹೊರತು ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಬೇಕು ಎಂದು ಸೂಚಿಸಿಲ್ಲ. ಒಂದು ವೇಳೆ ಆರ್ ಟಿಇ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಭರಿಸಿದರೆ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ ಎಂದು ಹೇಳಿದೆ.












Click it and Unblock the Notifications