Gram Panchayat; ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಿಗ್ ರಿಲೀಫ್
ಬೆಂಗಳೂರು, ಜುಲೈ 01: ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅನ್ಯ ಇಲಾಖೆ ಕೆಲಸಗಳನ್ನು ಪಿಡಿಒಗಳಿಗೆ ವಹಿಸುವ ಮುನ್ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಕ್ಷೇತ್ರೀಯ ಇಲಾಖೆಗಳು ವಹಿಸಿರುವ ಕಾರ್ಯಗಳನ್ನು ಹಿಂಪಡೆಯುವಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಈಗಾಗಲೇ ಪಿಡಿಒಗಳು ಸ್ವ-ಇಲಾಖೆ ಕಾರ್ಯಭಾರ ಒತ್ತಡದಲ್ಲಿದ್ದಾರೆ. ಆದ್ದರಿಂದ ಅನ್ಯ ಇಲಾಖೆ ಕೆಲಸದ ಹೊರೆಯನ್ನು ಹೊರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಲಾಗಿದೆ.
ಏಕೆ ಈ ಸುತ್ತೋಲೆ?: ಈಗ ಪಿಡಿಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗಮನಕ್ಕೆ ತಾರದೆ ಹಲವು ಇಲಾಖೆಯ ಕಾರ್ಯಗಳನ್ನು ವಹಿಸಲಾಗುತ್ತಿದೆ. ಆದ್ದರಿಂದ ಪಿಡಿಒಗಳಿಗೆ ತಮ್ಮ ಅಗತ್ಯ ಕೆಲಸಗಳನ್ನು ಮಾಡುವಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಸುತ್ತೋಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅನ್ಯ ಇಲಾಖೆ ಕೆಲಸ ವಹಿಸುವ ಮುನ್ನ ಗ್ರಾಮೀಣಾಭಿವೃದ್ಧಿ ಇಲಾಖೆ ಗಮನಕ್ಕೆ ತರಬೇಕು. ಕಳೆದ ಕೆಲವು ದಿನಗಳಿಂದ ಬೇರೆ-ಬೇರೆ ಇಲಾಖೆಗಳು ವಿವಿಧ ಕಾರ್ಯಗಳ ಮೇಲುಸ್ತುವಾರಿಯನ್ನು ಪಿಡಿಒಗಳಿಗೆ ವಹಿಸುವುದು ತಿಳಿದುಬಂದಿದೆ. ಆದ್ದರಿಂದ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಭಾರತ ಸರ್ಕಾರದ ಹಲವಾರು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳ ಕಾರ್ಯವೇ ಸಾಕಷ್ಟು ಇರುವುದರಿಂದ ಇವರಿಗೆ ಬೇರೆ ಕ್ಷೇತ್ರೀಯ ಇಲಾಖೆಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚಿಸುವುದಾಗಲೀ ಅಥವಾ ಮೇಲುಸ್ತುವಾರಿ ನೀಡುವ ಮುನ್ನ ಸರ್ಕಾರದ ಗಮನಕ್ಕೆ ತರಲು ಸೂಚಿಸಿದೆ.
ಪಿಡಿಒಗಳಿಗೆ ಬೇರೆ ಬೇರೆ ಇಲಾಖೆಯ ಕಾರ್ಯಗಳನ್ನು ವಹಿಸಲಾಗುತ್ತಿದೆ. ಆದ್ದರಿಂದ ಅವರಿಗೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಇಂತಹ ಕೆಲಸಗಳನ್ನು ವಹಿಸದಂತೆ ಸೂಚಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಇಲಾಖೆಗೆ ಮನವಿ ಮಾಡಿತ್ತು.
ಪಿಡಿಒ ಕಾರ್ಯಗಳು: ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಆಯಾ ರಾಜ್ಯ ಸರ್ಕಾರದಿಂದ ನೇಮಕಗೊಂಡ ಸರ್ಕಾರಿ ಅಧಿಕಾರಿಯಾಗಿದ್ದಾರೆ. ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ.
ಗ್ರಾಮೀಣಾಭಿವೃದ್ಧಿಗೆ ಮೀಸಲಿಟ್ಟ ಹಣ ಸಮರ್ಪಕವಾಗಿ ಬಳಕೆಯಾಗುವಂತೆ ಮತ್ತು ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಪಿಡಿಒ ಅವರ ಜವಾಬ್ದಾರಿ.
ಅವರು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲು ಸ್ಥಳೀಯ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಇತರರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಪಿಡಿಒ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಸರ್ಕಾರ ಮತ್ತು ಗ್ರಾಮೀಣ ಭಾಗದ ಜನರ ನಡುವೆ ಅವರು ಪ್ರಮುಖ ಕೊಂಡಿಯಾಗಿದ್ದಾರೆ. ಅವರು ಸ್ಥಳೀಯ ಭಾಷೆಗಳು, ಗ್ರಾಮೀಣ ಪದ್ಧತಿಗಳು ಮತ್ತು ಸಂಪ್ರದಾಯಗಳ ಜ್ಞಾನ ಹೊಂದಿರುತ್ತಾರೆ. ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಅವರು ಸಂವಹನ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಹೊಂದಿರುತ್ತಾರೆ.












Click it and Unblock the Notifications