ಅಂಚೆ ಮತದಾನ; ಸಿಬ್ಬಂದಿಗಳಿಗೆ ಸಿಗುವ ಗೌರವಧನ ಎಷ್ಟು?
ಬೆಂಗಳೂರು, ಏಪ್ರಿಲ್ 27; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ. ಆದರೆ ಇದಕ್ಕೂ ಮೊದಲು ಅಂಚೆ ಮತದಾನ ಮಾಡಲು ಅವಕಾಶವಿದೆ. ಸರ್ಕಾರ ಅಂಚೆ ಮತದಾನ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗಳಿಗೆ ಗೌರವಧನ ನೀಡುವ ಕುರಿತು ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿಆಸುಇ (ಚುನಾವಣೆಗೆಳು) ಸಂಜಯ್ ಬಿ. ಎಸ್. ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಂಚೆ ಮತದಾನ ಮಾಡಲು ಈಗಾಗಲೇ ದಿನಾಂಕವನ್ನು ಸಹ ನಿಗದಿ ಮಾಡಲಾಗಿದೆ.
ಚುನಾವಣಾ ಆಯೋಗದ ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡುವ ಸೌಲಭ್ಯವನ್ನು ಮತದಾನದ ವೇಳೆ ಗೈರು ಹಾಜರಾಗುವ ಮತದಾರರಿಗೆ ನೀಡಿದೆ. ಹಿರಿಯ ನಾಗರಿಕರು (80 ವರ್ಷ ಮೀರಿದ ವಯೋಮಾನದವರು). ಮತದಾರರ ಪಟ್ಟಿಯ ದತ್ತಾಂಶ ಮೂಲದಲ್ಲಿ ಗುರುತು ಮಾಡಿದ ವಿಕಲಚೇತನ ವ್ಯಕ್ತಿಗಳು. ಕೋವಿಡ್-19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳು ಮತ್ತು ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು ಅಂಚೆ ಮತದಾನ ಮಾಡಬಹುದು.

ಭಾರತ ಚುನಾವಣಾ ಆಯೋಗದ ಮಾರ್ಚ್ 29ರಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಾಗಲೇ ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2019 ಮತ್ತು ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2020ರ ಅನುಸಾರ ಅಂಚೆ ಮತದಾನ ಮಾಡಲು ಅವಕಾಶ ನೀಡಿದೆ. ಅಂಚೆ ಮತದಾನ ಮಾಡುವವರ ಸಂಖ್ಯೆಯು ಹೆಚ್ಚಾಗಿರುವ ಕಾರಣ ಹಾಗೂ ಅಂಚೆ ಮತದಾನ ಕಾರ್ಯಕ್ಕೆ ಇಬ್ಬರು ಮತದಾನ ಅಧಿಕಾರಿ ಸಹಿತ ವಿಡಿಯೋಗ್ರಾಫರ್ ಮತ್ತು ಭದ್ರತಾ ಸಿಬ್ಬಂದಿಗಳು ಗರಿಷ್ಠ ಎರಡು ಬಾರಿ ಮತದಾರರ ವಿಳಾಸಕ್ಕೆ, ಭೇಟಿ ನೀಡುವುದರಿಂದ ಈ ಕಾರ್ಯದಲ್ಲಿ ತೊಡಗುವ ಮತದಾನದ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ ಹಾಗೂ ಮತಗಟ್ಟೆ, ಮಟ್ಟದ ಅಧಿಕಾರಿಗಳಿಗೆ ಗೌರವಧನ ಪಾವತಿಸುವ ಅಗತ್ಯತೆ ಇರುತ್ತದೆ.
ಗೌರವಧನ ಪರಿಷ್ಕರಣೆ; ಅಂಚೆ ಮತದಾನದ ಕಾರ್ಯದಲ್ಲಿ ಭಾಗಿಯಾಗುವ ಪರಿವೀಕ್ಷಕರು ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗೌರವಧನವನ್ನು ಪಾವತಿಸಬೇಕಾಗಿರುತ್ತದೆ. ಆದ್ದರಿಂದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಗೌರವಧನದ ದರಗಳನ್ನು ಪರಿಷ್ಕರಿಸುವುದರೊಂದಿಗೆ, ಮುಂದಿನ ಆದೇಶದ ತನಕ ಗೌರವಧನ ನಿಗದಿ ಮಾಡಲಾಗಿದೆ. ಪರಿಷ್ಕೃತ ದರಗಳಂತೆ ಗೌರವಧನ ಹೀಗಿದೆ.

* ಮತದಾನ ಅಧಿಕಾರಿ 350 ರೂ.ಗಳು
* ಸೂಕ್ಷ್ಮ ಪರಿವೀಕ್ಷಕ 1500 ರೂ. ಗಳು
* ಮತಗಟ್ಟೆ ಮಟ್ಟದ ಅಧಿಕಾರಿ 350 ರೂ.ಗಳು
* ಗ್ರೂಪ್-ಡಿ 200 ರೂ.ಗಳು.
ಸದರಿ ಗೌರವಧನವನ್ನು ಅಂಚೆ ಮತಪತ್ರದ ಮತದಾನ ಕೇಂದ್ರ, ಸೌಲಭ್ಯ ಕೇಂದ್ರಕ್ಕೆ ನಿಯೋಜನೆಗೊಳ್ಳುವ ಸಿಬ್ಭಂದಿಗೂ ಪಾವತಿ ಮಾಡಬೇಕು. ಒಬ್ಬ ಅಧಿಕಾರಿ, ಸಿಬ್ಭಂದಿಗೆ ಒಟ್ಟಾರೆ ಚುನಾವಣೆ ಕಾರ್ಯಕ್ಕಾಗಿ ಒಂದು ಬಾರಿಗೆ ಅನ್ವಯವಾಗುವಂತೆ ಮಾತ್ರ ಗೌರವಧನವನ್ನು ಮಂಜೂರು ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಎಷ್ಟು ಮತದಾರರು?; ಚುನಾವಣಾ ಆಯೋಗದ ಮಾಹಿತಿಯಂತೆ ಈ ಬಾರಿಯ ಚುನಾವಣೆಯಲ್ಲಿ ಹಿರಿಯ ನಾಗರಿಕರು (80 ವರ್ಷ ಮೀರಿದ ವಯೋಮಾನದವರು). ಮತದಾರರ ಪಟ್ಟಿಯ ದತ್ತಾಂಶ ಮೂಲದಲ್ಲಿ ಗುರುತು ಮಾಡಿದ ವಿಕಲಚೇತನ ವ್ಯಕ್ತಿಗಳು. ಕೋವಿಡ್-19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳು ಮತ್ತು ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು ಸೇರಿ ಎಷ್ಟು ಜನ ಮತದಾರರು ಇದ್ದಾರೆ ಎಂಬ ಮಾಹಿತಿ ನೀಡಲಾಗಿದೆ.
ರಾಜ್ಯಾದ್ಯಂತ ಹಿರಿಯ ನಾಗರಿಕರು 80,250 ರೂ. ವಿಕಲಚೇತನರು 19,279, ಕೋವಿಡ್-19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳು ಯಾವುದೇ ಮತದಾರರು ಇಲ್ಲ. ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು 13,771 ಮತ್ತು ಚುನಾವಣಾ ಕರ್ತವ್ಯದ ಅಧಿಕಾರಿಗಳು 1,78,523 ಮತದಾರರು ಇದ್ದಾರೆ.












Click it and Unblock the Notifications