Siddaramaiah: ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಗೆ ಎದುರಾಯ್ತು ದೊಡ್ಡ ಕಂಟಕ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರ ಬೆನ್ನತ್ತಿದೆ. ಈ ಪ್ರಕರಣದಲ್ಲಿ ಆರೋಪಿಯೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ನಿನ್ನೆ ಶಾಕ್ ನೀಡಿದೆ. ಹಗರಣ ನಡೆದಿರುವುದು ನಿಜ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಮುಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ನಾಟಕವಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವಾಡ ನಿನ್ನೆ ಇಡಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಿಂದ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಮುಖ್ಯಮಂತ್ರಿಗಳ ಧರ್ಮಪತ್ನಿ ಅವರಿಗೆ ಅಕ್ರಮವಾಗಿ ಹಂಚಿಯಾಗಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳಲ್ಲಿ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವ ಬಳಕೆಯಾಗಿರುವುದು ಇಡಿ ಹೇಳಿಕೆಯಲ್ಲಿ ಸುಸ್ಪಷ್ಟವಾಗಿದೆ ಎಂದು ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯನವರ ಧರ್ಮಪತ್ನಿ ಅವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆಯಾದ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ನಟೇಶ್ ಮತ್ತಿತರ ಅಧಿಕಾರಿಗಳು ಇನ್ನೂ ಅನೇಕ ಅಕ್ರಮಗಳನ್ನು ಎಸಗಿರುವುದು ಕೂಡ ಬೆಳಕಿಗೆ ಬಂದಿದ್ದು, ಸುಮಾರು 300 ಕೋಟಿ ರೂಪಾಯಿ ಬೆಲೆಬಾಳುವ 142 ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಜಾರಿ ನಿರ್ದೇಶನಾಲಯವು (ಇಡಿ) ಮುಡಾದಲ್ಲಿ ನಡೆದಿರುವ ನಿವೇಶನಗಳ ಲೂಟಿ, ಸಾವಿರಾರು ಕೋಟಿ ರೂಪಾಯಿಗಳ ನಷ್ಟ, ಹಾಗೂ ಅಕ್ರಮ ಹಣ ವರ್ಗಾವಣೆ ಹಗರಣದ ಕುರಿತ ತನಿಖೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪವಿರುವ ಆರೋಪದಲ್ಲಿಯೂ ಸತ್ಯಾಂಶವಿದೆಯೆಂಬ ಅಂಶಗಳನ್ನು ವಿವರಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.

ಸದ್ಯ ಸುಮಾರು 300 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ 142 ಸ್ಥಿರಾಸ್ತಿಗಳನ್ನು ಕಾಯ್ದೆಯ ಅನುಸಾರ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇಡಿ ಘೋಷಿಸಿದೆ. ಹಗರಣದ ಆಳ ದೊಡ್ಡದಾಗಿರುವ ಹಿನ್ನಲೆಯಲ್ಲಿ ತನಿಖೆಯು ಮುಂದುವರೆದಿರುವುದಾಗಿಯೂ ಹೇಳಿದೆ ಎಂದಿದ್ದಾರೆ.
ತಮ್ಮ ವಿರುದ್ಧ ಹೈಕೋರ್ಟ್ ತೀರ್ಪು ಹೊರಬಂದಾಗಲೇ ಕರ್ನಾಟಕದ ಘನತೆ ಪ್ರತಿನಿಧಿಸುವ ಮುಖ್ಯಮಂತ್ರಿ ಸ್ಥಾನದ ಗೌರವ ಉಳಿಸಲು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿತ್ತು. ಆದರೆ ನೈತಿಕತೆ ಎಂಬುದು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರು ಭಂಡತನದ ಪರಮಾವಧಿ ಮೆರೆದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಾಯುಕ್ತದದಲ್ಲಿ ತಾವೇ ನಿಯುಕ್ತಿಗೊಳಿಸಿಕೊಂಡ ತಮ್ಮ ಅಧಿಕಾರಿಗಳ ಮೂಲಕ ತನಿಖೆ ನಡೆಸಿ, ಕ್ಲೀನ್‌ಚಿಟ್ ಪಡೆಯುವ ತಯಾರಿಯಲ್ಲಿದ್ದ ಸಿದ್ದರಾಮಯ್ಯನವರಿಗೆ ಇಡಿ ಬಿಡುಗಡೆ ಮಾಡಿರುವ ತನಿಖಾ ವರದಿಯ ಪ್ರಕಟಣೆ ಅವರ ಕಳಂಕಿತ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ಇಡಿ ಮುಡಾ ನಿವೇಶನಗಳ ಲೂಟಿಕೋರತನದ ಭ್ರಷ್ಟತೆಯ ಕರ್ಮಕಾಂಡವನ್ನು ಇದೀಗ ಜನತೆಯ ಮುಂದಿಟ್ಟಿದೆ ಎಂದಿದ್ದಾರೆ.

ಹೈಕೋರ್ಟ್‌ನಲ್ಲಿ ಸಿಬಿಐ ಕೋರಿಕೆಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ನಿರ್ಣಾಯಕ ಹಂತ ತಲುಪಿರುವ ಈ ಸಮಯದಲ್ಲೇ ಹಗರಣವನ್ನು ಇಡಿ ಬಯಲು ಮಾಡಿದೆ. ಸದ್ಯ ಈಗಾಗಲೇ 14 ಅಕ್ರಮ ನಿವೇಶನಗಳನ್ನು ಮುಡಾಗೆ ಬೇಷರತ್ ಹಿಂದಿರುಗಿಸಿರುವ ಸಿದ್ದರಾಮಯ್ಯನವರು ಆ ಮೂಲಕ ತಮ್ಮ ಸ್ವಜನಪಕ್ಷಪಾತ ಹಾಗೂ ಭ್ರಷ್ಟತೆಯನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬರ ಭ್ರಷ್ಟತೆ ಹಾಗೂ ಅಕ್ರಮದ ಸಾಕ್ಷಾಧಾರಗಳು ಇಷ್ಟರ ಮಟ್ಟಿಗೆ ಸಾಬೀತಾಗಿರುವ ಹಗರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ಸಿಎಂ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬರು ಈ ರೀತಿ ಆರೋಪ ಹೊತ್ತು ಆಡಳಿತ ನಡೆಸುತ್ತಿರುವ ದಾಖಲೆ ಸಿದ್ದರಾಮಯ್ಯನವರ ಹೆಸರಲ್ಲಿ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications