ಸಿಎಂಗೆ ಕುರ್ಚಿ ಚಿಂತೆ, ಶಾಸಕರಿಗೆ ಸಚಿವ ಸ್ಥಾನದ ಚಿಂತೆ: ಅಶೋಕ್ ಗೇಲಿ
ರಾಜ್ಯ ಕಾಂಗ್ರೆಸ್ ನಾಯಕರ ಸಾಧನೆ ವರದಿ ನೀಡದ್ದಕ್ಕೆ ಹೈಕಮಾಂಡ್ ನಾಯಕರು ಗರಂ ಆಗಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದ್ದಾರೆ. ಸಾಧನೆಗಳಿದ್ದರೆ ತಾನೆ ವರದಿ ಕೊಡೋದಕ್ಕೆ? ಸಿಎಂಗೆ ಕುರ್ಚಿ ಚಿಂತೆ, ಶಾಸಕರಿಗೆ ಸಚಿವ ಸ್ಥಾನದ ಚಿಂತೆ ಎಂದು ಕಾಲೆಳೆದಿದ್ದಾರೆ.
ಪಾಪ ತಾವು ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮ ಪಡುತ್ತಿದ್ದೀರಿ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ? ರಾಜ್ಯದಲ್ಲಿ ತಮ್ಮ ಪಕ್ಷದ ಗೋಳೇನು ಎನ್ನುವ ಬಗ್ಗೆ ತಮಗೆ ಬಹುಶಃ ಮಾಹಿತಿ ಇಲ್ಲ ಎಂದು ಕಾಣುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ನಾನು ಈಗಾಗಲೇ ಹಲವು ಬಾರಿ ಹೇಳಿರುವಂತೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ "ಗುರುವಾರದ ಸರ್ಕಾರ". ಗುರುವಾರ ಸಂಪುಟ ಸಭೆ ನಡೆಯುವ ದಿನ ಮಾತ್ರ ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳು ವಿಧಾನಸೌಧದಲ್ಲಿ, ವಿಕಾಸಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಬಾಕಿ ದಿನ ಎಲ್ಲರೂ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿಗಳಿಗೆ ಕಾನೂನು ಹೋರಾಟ, ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಮುಖ್ಯಮಂತ್ರಿ ಆಗಲು ತುದಿಗಾಲಲ್ಲಿ ನಿಂತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರಿಗೆ ಹಗಲು, ರಾತ್ರಿ ಅದೇ ಕನಸು. ಇನ್ನು ಉಳಿದ ಕೆಲವರಿಗೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಏನಾದರೂ ಲಾಭವಿದೆಯೇ ಎನ್ನುವ ಆಸೆ. ಇನ್ನು ಹಿರಿಯ ಶಾಸಕರಿಗೆ ಸಂಪುಟ ಪುನರ್ ರಚನೆಯಲ್ಲಿ ಒಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಚಿಂತೆ ಎಂದು ಲೇವಡಿ ಮಾಡಿದ್ದಾರೆ.
ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಮಗೆ ತಿಳಿದೇ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕೋದಕ್ಕೂ ದುಡ್ಡಿಲ್ಲ ಅಂತ ತಾವೇ ಹೇಳಿದ್ದೀರಿ. ಪರಿಸ್ಥಿತಿ ಹೀಗಿರುವಾಗ ಆಡಳಿತ ಹಳಿ ತಪ್ಪದೇ ಇರುತ್ತದೆಯೇ? ಪಾಪ ಕಾಂಗ್ರೆಸ್ ಸಚಿವರು ಏನಾದರೂ ಸಾಧನೆ ಮಾಡಿದ್ದರೆ ತಾನೇ ತಮಗೆ ವರದಿ ಕೊಡೋಕೆ? ಎಂದು ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಹೇಳಿಕೆಗೆ ಅಶೋಕ್ ಕಿಡಿ!
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ಬಗ್ಗೆ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿಯೂ ಅಶೋಕ್ ತಿರುಗೇಟು ನೀಡಿದ್ದಾರೆ. ತಾವು ಒಂದು ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದೀರಿ. ಹಿಂದೂಗಳ ಬಗ್ಗೆ, ಹಿಂದೂ ಧಾರ್ಮಿಕ ಗುರುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ ಎಂದು ಹೇಳಿದ್ದಾರೆ.
ಕ್ರಿಮಿನಲ್ ಕೆಲ್ಸ ಮಾಡಿ ಜೈ ಶ್ರೀರಾಮ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದೀರಿ. ಕ್ರಿಮಿನಲ್ ಕೆಲಸ ಮಾಡಿರುವುದು ಸ್ವಾಮೀಜಿ ಅಲ್ಲ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಕ್ರಿಮಿನಲ್ ಕೆಲಸ ಎಂದು ತಿವಿದಿದ್ದಾರೆ.
ಸಂವಿಧಾನ ರಕ್ಷಿಸುವ ಜಾಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಸಮರ್ಥಿಸಿಕೊಂಡಿದ್ದು, ಆ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದು ಕ್ರಿಮಿನಲ್ ಕೆಲಸ. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ದೇಶದ್ರೋಹಿಗಳ ರಕ್ಷಣೆಗೆ ನಿಂತಿದ್ದು ಕ್ರಿಮಿನಲ್ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications