ಬಸ್‌ಗಳ ಆಯುಧ ಪೂಜೆಗೆ ಸರ್ಕಾರ ಕೊಟ್ಟ ಹಣ ಕೇಳಿದ್ರೆ ನಗೋದು ಗ್ಯಾರಂಟಿ!
ನವರಾತ್ರಿ ಹಿನ್ನೆಲೆ ವಾಹನಗಳು ಸೇರಿದಂತೆ ಎಲ್ಲ ವಸ್ತುಗಳಿಗೆ ಆಯುಧ ಪೂಜೆ ಮಾಡುವುದು ವಾಡಿಕೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಬಸ್‌ಗಳಿಗೂ ಕೂಡ ಪ್ರತಿ ವರ್ಷ ಆಯುಧ ಪೂಜೆ ಮಾಡಲಾಗುತ್ತದೆ. ಅಂದು ಎಲ್ಲರಂತೆ ಬಸ್‌ಗಳನ್ನು ಅಲಂಕರಿಸಿ, ಪೂಜೆಯೂ ಮಾಡುತ್ತಾರೆ. ಆದರೆ, ಈ ಬಾರಿಯೂ ಆಯುಧ ಪೂಜೆಗಾಗಿ ಪ್ರತಿ ಬಸ್‌ಗೆ ಸರ್ಕಾರ ನೀಡಿರುವ ಹಣ ಎಷ್ಟು ಎಂದು ಕೇಳಿದ್ರೆ ನೀವು ಗ್ಯಾರಂಟಿ ನಗುತ್ತೀರ.
ಪ್ರತಿ ಬಾರಿ ದಸರಾ ಬಂದಾಗಲೂ ಈ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಪ್ರಯಾಣಿಕರ ಸೇವೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ಕೇವಲ 100 ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಆಯುಧ ಪೂಜೆಗೂ ಕೆಎಸ್‌ಆರ್‌ಟಿಸಿಗೆ ದುಡ್ಡು ಗತಿ ಇಲ್ವಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಶಕ್ತಿ ಯೋಜನೆಯಿಂದ ನಿಗಮಗಳು ನಷ್ಟದಲ್ಲಿಲ್ಲ. ಇದರಿಂದ ಪರೋಕ್ಷವಾಗಿ ಆದಾಯ ಹರಿದುಬರುತ್ತಿದೆ ಎಂದು ಸಚಿವರು ಹಾಗೂ ರಾಜ್ಯ ಸರ್ಕಾರ ಹಲವು ವೇದಿಕೆಗಳಲ್ಲಿ ಕೊಚ್ಚಿಕೊಂಡಿದೆ. ಹೀಗಿರುವಾಗ ಆಯುಧ ಪೂಜೆಗೆ ಕೇವಲ ನೂರು ರೂಪಾಯಿ ನೀಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ವರ್ಷಕ್ಕೊಮ್ಮೆ ತಮ್ಮ ಬಸ್‌ಗಳನ್ನು ಚೆನ್ನಾಗಿ ಅಲಂಕರಿಸಬೇಕು. ರಥದಂತೆ ಸಿಂಗರಿಸಿ ರೋಡಲ್ಲಿ ಜುಮ್ ಎಂದು ಕಾಣುವಂತೆ ಓಡಾಡಬೇಕು ಎಂದು ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಸ್‌ಗಳನ್ನು ತಮ್ಮ ಮನೆಯ ಸ್ವಂತ ವಾಹನ ಎನ್ನುವ ರೀತಿಯಲ್ಲಿ ಅಟ್ಯಾಚ್‌ಮೆಂಟ್ ಇಟ್ಟುಕೊಂಡವರೂ ಇದ್ದಾರೆ. ಆದರೆ ನಿಗಮ ಆಯುಧಪೂಜೆ ನೀಡಿರುವ ಹಣ ಇವರ ಆಸೆಗೆ ತಣ್ಣೀರೆರಚಿದೆ.

ಕಳೆದ ವರ್ಷವೂ ನಿಗಮವು ಆಯುಧ ಪೂಜೆಗೆ ಕೇವಲ ನೂರು ರೂಪಾಯಿಯನ್ನೇ ಬಿಡುಗಡೆ ಮಾಡಿತ್ತು. ಇದರಿಂದ ಸಿಡಿದೆದ್ದಿದ್ದ ಸಿಬ್ಬಂದಿ ತಮ್ಮ ಸ್ವಂತ ಖರ್ಚಿನಲ್ಲೇ ಬಸ್‌ಗಳನ್ನು ಸೊಗಸಾಗಿ ಸಿಂಗರಿಸಿ, ಸರ್ಕಾರದ ಮುಖಕ್ಕೆ ಹೊಡೆದಂತೆ ಪೂಜೆ ನೆರವೇರಿಸಿದ್ದರು. ಕೊನೆ ಪಕ್ಷ ಈ ವರ್ಷವಾದರೂ ಹೆಚ್ಚು ಹಣ ಕೊಡುವ ನಿರೀಕ್ಷೆಯಲ್ಲಿದ್ದ ಸಿಬ್ಬಂದಿಗೆ ಮತ್ತೆ ನಿರಾಸೆಯಾಗಿದೆ.
ಪ್ರತಿ ಬಸ್‌ಗೆ ತಲಾ 100 ರೂಪಾಯಿ ಅಷ್ಟೇ ನೀಡುವುದಾಗಿ ನಿಗಮ ತಿಳಿಸಿದೆ. ಈ ಹಣದಲ್ಲಿ ಬಸ್‌ಗೊಂದು ದೊಡ್ಡ ಹಾರ ಕೂಡ ಖರೀದಿಸಲು ಸಾಧ್ಯವಿಲ್ಲ. ಪೂಜೆ ಎಂದರೆ, ತೆಂಗಿನಕಾಯಿ, ಅಗರಬತ್ತಿ, ಕರ್ಪೂರ, ಬೂದಗುಂಬಳ, ಅರಿಶಿನ-ಕುಂಕುಮ ಸೇರಿದಂತೆ ಎಷ್ಟೆಲ್ಲ ವಸ್ತುಗಳು ಬೇಕು. ನೂರು ರೂಪಾಯಿಯಲ್ಲಿ ಇದನ್ನೆಲ್ಲ ತಂದು ಪೂಜೆ ಮಾಡಲು ಸಾಧ್ಯವೇ? ಎಂದು ಸಿಬ್ಬಂದಿ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ "ಶಕ್ತಿ" ಯೋಜನೆ ಅತ್ಯಂತ ಜನಪ್ರಿಯವಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವಿಭಾಗಕ್ಕೆ 159 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷ ಈ ಹೊತ್ತಿಗೆ ನಷ್ಟದ ಸುಳಿಯಲ್ಲಿ ಸಿಲುಕಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆ ಜಾರಿಗೊಂಡ ನಂತರದಲ್ಲಿ ಲಾಭದ ಹಾದಿಗೆ ಮರಳಿದೆ ಎಂದಿದ್ದರು.
ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಗಳು ಇಂದು ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ. ವಿವಿಧ ಸಾರಿಗೆ ಸಂಸ್ಥೆಗಳಿಗೆ ಶೇ 57.5ರಷ್ಟು ಶಕ್ತಿ ಯೋಜನೆ ಹೊರತಾದ ಪ್ರಯಾಣಿಕರಿಂದ ಆದಾಯ ಬರುತ್ತಿದೆ ಎಂದು ಭಾಷಣದಲ್ಲಿ ಹೇಳಿದ್ದರು. ಇಷ್ಟೆಲ್ಲ ಲಾಭ ಬಂದರೂ ಆಯುಧ ಪೂಜೆ ಈ ಬಿಡಿಗಾಸು ಕೊಡುವ ಅಗತ್ಯವೇನಿತ್ತು? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications