ಭಾರತ್ ಜೋ‌ಡೋ ಯಾತ್ರೆಗೆ 1 ವರ್ಷ; ಫೋಟೋ ಹಂಚಿಕೊಂಡು ನನ್ನ ಬದುಕಿನ ಭಾಗ್ಯ ಎಂದ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್‌ 07: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಗೆ ಇಂದಿಗೆ (ಸೆಪ್ಟೆಂಬರ್‌ 7) ಒಂದು ವರ್ಷ ಪೂರೈಸಿದ್ದು, ಯಾತ್ರೆಯಲ್ಲಿ ಹೆಜ್ಜೆ ಹಾಕುವ ಅವಕಾಶ ನನಗೂ ಒದಗಿಬಂದಿರುವುದು ನನ್ನ ಬದುಕಿನ ಭಾಗ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಭಾರತ್‌ ಜೋಡೋ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಜೊತೆಗೆ ಹೆಜ್ಜೆ ಹಾಕಿರುವ ಪೋಟೋಗಳನ್ನ ಪೋಸ್ಟ್‌ ಮಾಡಿದ್ದು, ನನ್ನ ಬದುಕಿನ ಭಾಗ್ಯ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ಮತ್ತು ದೇಶದ ಭರವಸೆಯ ಆಶಾಕಿರಣ ರಾಹುಲ್‌ ಗಾಂಧಿ ಅವರ ಜೊತೆ ಭಾರತ್ ಜೋಡೊ ಎಂಬ ಐತಿಹಾಸಿಕ ಪಾದಯಾತ್ರೆ ಶುರುವಾಗಿ ಇಂದಿಗೆ ಒಂದು ವರ್ಷ.

One year for Bharat Jodo Yatra: Siddaramaiah said that it is the fortune of my life

ದ್ವೇಷ ಮಾರಾಟದ ಸಂತೆಯಲ್ಲಿ ಪ್ರೀತಿ ಹಂಚುವ ಅಂಗಡಿ ತೆರೆಯುತ್ತೇನೆ ಎಂಬ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿಯವರು ಶುರುಮಾಡಿದ್ದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಅವಕಾಶ ನನಗೂ ಒದಗಿಬಂದಿರುವುದು ನನ್ನ ಬದುಕಿನ ಭಾಗ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದ್ವೇಷ ಹಂಚುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದ ಕೋಮುವಾದಿ ಶಕ್ತಿಗಳ ವಿರುದ್ಧ ಸೆಡ್ಡುಹೊಡೆದು ನಾವು ಬಿತ್ತಿದ್ದ ಪ್ರೀತಿಯ ಬೀಜ ವ್ಯರ್ಥವಾಗಲಿಲ್ಲ. ನಾಡಿನ ಸೌಹಾರ್ದ ಮನಸುಗಳನ್ನು ಒಂದಾಗಿಸಿದ ಭಾರತ್ ಜೋಡೊ ಯಾತ್ರೆಯ ಫಲ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ.

ರಾಹುಲ್‌ ಗಾಂಧಿ ಅವರು ಭಾರತ ಜೋಡೋ ಪಾದಯಾತ್ರೆಯುದ್ದಕ್ಕೂ ಜನತೆಯ ಜೊತೆ ನಡೆಸಿದ್ದ ಚರ್ಚೆ-ಸಂವಾದದ ಮೂಲಕ ಪಡೆದ ಅನುಭವದ ಫಲವೇ ನಮ್ಮ ಗ್ಯಾರಂಟಿ ಯೋಜನೆಗಳು ಎನ್ನುವುದನ್ನು ಈ ಸಂದರ್ಭದಲ್ಲಿ ಕೃತಜ್ಞತಾ ಪೂರ್ವಕವಾಗಿ ನೆನಪು ಮಾಡಿಕೊಳ್ಳುತ್ತೇನೆ.

One year for Bharat Jodo Yatra: Siddaramaiah said that it is the fortune of my life

ಭಾರತದ ಇತಿಹಾಸದಲ್ಲಿ, ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ 1885ರಿಂದ ಈವರೆಗಿನ ಸುಮಾರು ಒಂದೂಕಾಲು ಶತಮಾನದ ಅವಧಿ ಏನಿದೆ ಅದು ಗುಲಾಮಗಿರಿಯಿಂದ ಪ್ರಜಾಪ್ರಭುತ್ವದೆಡೆಗಿನ, ಅರಸೊತ್ತಿಗೆಯಿಂದ ಜನತಂತ್ರದೆಡೆಗಿನ, ಅಸಮಾನತೆಯಿಂದ ಸಮಾನತೆಯೆಡೆಗಿನ ಚಲನೆಯಾಗಿದೆ. ಭಿನ್ನತೆಯಿಂದ ಬಹುತ್ವದ ಕಸುವನ್ನೂ, ವೈವಿಧ್ಯತೆಯಿಂದ ಏಕತೆಯ ಬಲವನ್ನೂ ಪಡೆಯುವ ಮೂಲಕ ಭಾರತ ಇಂದು ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ದೇಶದ ಈ ಅಭೂತಪೂರ್ವ ಪಯಣದಲ್ಲಿ ಚಾಲಕಶಕ್ತಿಯಂತೆ ಕಾರ್ಯನಿರ್ವಹಿಸಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯೂ ಹೊರಬೇಕಾಗಿದೆ. ಒಡೆದು ಹೋಗುತ್ತಿರುವ ಭಾರತವನ್ನು ಜೋಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಉನ್ನತ ಮೌಲ್ಯಗಳನ್ನು ಅನುಸರಿಸಿದಂತೆಯೇ ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಸಹ ಕಾಂಗ್ರೆಸ್ ಪಕ್ಷವು ಶಾಂತಿ, ಸಾಮರಸ್ಯ, ಧಾರ್ಮಿಕ ಸಹಿಷ್ಣುತೆಯಂಥ ಪ್ರಜಾತಾಂತ್ರಿಕ ಮೌಲ್ಯಗಳನ್ನು, ದೇಶದ ಏಕತೆಯನ್ನು ಎತ್ತಿ ಹಿಡಿಯುತ್ತಲೇ ಇಲ್ಲಿನ ವೈವಿಧ್ಯತೆ, ಬಹುತ್ವವನ್ನು ಸಂಭ್ರಮಿಸುವಲ್ಲಿ ಮುಂಚೂಣಿಯಲ್ಲಿದೆ. ರಾಹುಲ್ ಗಾಂಧಿಯವರು ಭಾರತ ಜೋಡೊ ಪಾದಯಾತ್ರೆಯ ನೇತೃತ್ವ ವಹಿಸಿದ್ದರೂ ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಇದು ಭಾರತೀಯರೆಲ್ಲರ ಕಾರ್ಯಕ್ರಮ. ದೇಶದ ಬೇರೆಬೇರೆ ಭಾಗಗಳಿಂದ, ಜಾತಿ, ಧರ್ಮ, ಪಕ್ಷ, ಪಂಥಗಳನ್ನು ಮೀರಿ ಜನ ಬಂದು ಇದರಲ್ಲಿ ಭಾಗವಹಿಸಿದ್ದರು.

ಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಶುರುಮಾಡಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಪ್ರಜೆಗಳ ದನಿಗೆ ಕಿವಿಗೊಡಬೇಕು. ಅವರ ಕಷ್ಟ-ಸುಖ, ಸಮಸ್ಯೆ-ಸಂಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡಬೇಕು. ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಆದರೆ ಭಾರತೀಯ ಜನತಾ ಪಕ್ಷ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ನಡುವೆ ಪರಸ್ಪರ ದ್ವೇಷಾಸೂಯೆಗಳನ್ನು ಬಿತ್ತಿ ಸಮಾಜವನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಮಾಡುತ್ತಿದೆ. ಅನ್ಯಾಯದ ವಿರುದ್ದ ದನಿ ಎತ್ತುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಸಂಘಟಿತವಾದ ಹೋರಾಟ ನಡೆಯಬೇಕಾಗಿದೆ.

ಇದು ನಾವೆಲ್ಲ ಕೈಕಟ್ಟಿ ತೆಪ್ಪಗೆ ಕೂರುವ ಕಾಲ ಅಲ್ಲ. ದೇಶ ಉಳಿಸುವ ಕರೆಗೆ ನಾವೆಲ್ಲರೂ ಓಗೊಡಬೇಕಾಗಿದೆ. ದೇಶದ ಏಕತೆ,ಸಮಗ್ರತೆಯನ್ನು ಉಳಿಸಲು, ದೇಶದ ಸಂಪತ್ತಿನ ಲೂಟಿಯನ್ನು ತಡೆಯಲು, ಸಂವಿಧಾನದ ಗೌರವವನ್ನು ಕಾಪಾಡಲು, ನಮ್ಮ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ.

ಈ ಹೋರಾಟಕ್ಕೆ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಪಂಡಿತ ಜವಾಹರಲಾಲ ನೆಹರೂ, ಮೌಲಾನ ಅಬುಲ್ ಕಲಮ್ ಆಜಾದ್, ವಲ್ಲಭಭಾಯಿ ಪಟೇಲ್, ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವ್ ಗಾಂಧಿ ಸೇರಿದಂತೆ ಹಿರಿಯ ಚೇತನಗಳು ನಡೆಸಿದ ಹೋರಾಟ ಸ್ಪೂರ್ತಿಯಾಗಬೇಕು.

ಬನ್ನಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಮುನ್ನಡೆಯೋಣ, ಕೈಗೆ ಕೈ ಜೋಡಿಸಿ ಹೋರಾಟಕ್ಕೆ ಬಲತುಂಬೋಣ. ಒಡೆಯುವವರನ್ನು ಹಿಮ್ಮೆಟ್ಟಿಸಿ ಕಟ್ಟುವ ಕಾಯಕದಲ್ಲಿ ತೊಡಗಿಸೋಣ. ನವಕರ್ನಾಟಕವನ್ನೊಳಗೊಂಡ ನವಭಾರತವನ್ನು ನಿರ್ಮಿಸೋಣ ಎಂದು ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+