Tour Package: ಹುಬ್ಬಳ್ಳಿ-ಜೋಗ ಜಲಪಾತಕ್ಕೆ NWKRTC ವಿಶೇಷ ಬಸ್ ವ್ಯವಸ್ಥೆ, ಟಿಕೆಟ್ ದರ-ವೇಳಾಪಟ್ಟಿ
ಹುಬ್ಬಳ್ಳಿ: ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂಗಾರು ಮಳೆ ನಿರಂತರವಾಗಿ ಸುರಿದಿದೆ. ಪರಿಣಾಮ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಜೋಗದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಪ್ರವಾಸಿಗರ ದಂಡೇ ದಾಂಗುಡಿ ಇಡುತ್ತಿದೆ. ಉತ್ತರ ಕರ್ನಾಟಕ ಭಾಗದಿಂದ ಜೋಗಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಎಸಿ ಹಾಗೂ ವೇಗದೂತ ಬಸ್‌ಗಳ ವ್ಯವಸ್ಥೆ ಮಾಡಿದೆ. ಈ ಟೂರ್ ಪ್ಯಾಕೇಜ್ ದರ, ಸಮಯ ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ರಾಜ್ಯದ ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಜೋಗಕ್ಕೆ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ದಿನಗಳಂದು 'ವೋಲ್ವೋ ಎಸಿ ಬಸ್, ವೇಗದೂತ ಸಾರಿಗೆ ವಿಶೇಷ ಬಸ್ಸುಗಳ' ಕಾರ್ಯಾಚರಣೆ ನಡೆಸಲು ಆದೇಶಿಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಉತ್ತಮ ಮುಂಗಾರು ಆರಂಭ ಬೆನ್ನಲ್ಲೆ ಮಲೆನಾಡಿನ ಹಸಿರ ಸಿರಿ ನಡುವೆ ಹಾಲಿ ನೊರೆಯಂತೆ ಕಾಣುತ್ತದೆ. ಮೈದುಂಬಿ ಹರಿಯುವ ಜೋಗವನ್ನು ಮುಂಗಾರು ಋತುವಿನಲ್ಲಿ ನೋಡುವುದೇ ಚೆಂದ. ಜೋಗದ 'ರಾಜಾ ರಾಣಿ ರೋರರ್ ರಾಕೆಟ್' ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಣ್ಮನ ಸೆಳೆಯುವ ಜೋಗದ ವೀಕ್ಷಣೆಗೆ ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲಿನ ಜನರಿಗೆ NWKRTC ವಿಶೇಷ್ ಬಸ್‌ಗಳು ಸಹಕಾರಿಯಾಗಿವೆ.
ಜೋಗ ಪ್ಯಾಕೇಜ್: ವಿಶೇಷ ನೇರ ಬಸ್ ಸಂಚಾರ, ವೇಳಾಪಟ್ಟಿ
ಸಾರ್ವಜನಿಕರ ಬೇಡಿಕೆಯ ಮೇರೆಗೆ ಪ್ರವಾಸಿಗರ ಅನುಕೂಲಕ್ಕಾಗಿ ಎರಡನೇ ಶನಿವಾರ ನಾಲ್ಕನೇ ಶನಿವಾರ ರವಿವಾರ ಹಾಗೂ ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿಯಿಂದ ಜೋಗಫಾಲ್ಸ್ ಗೆ ನೇರವಾಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತವೆ. ಮಾರ್ಗ ಮಧ್ಯೆ ಶಿರಸಿಯ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗ್ ಫಾಲ್ಸ್ ನಲ್ಲಿ ಜಲಪಾತ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಣೆ, ಊಟೋಪಚಾರ ಹಾಗೂ ವಿಶ್ರಾಂತಿಗಾಗಿ ಸಾಕಷ್ಟು ಸಮಯಾವಕಾಶ ಸಹ ನೀಡಲಾಗಿದೆ ಎಂದು ರಾಮನಗೌಡ ತಿಳಿಸಿದ್ದಾರೆ.
ಬಸ್‌ಗಳ ಸಂಚಾರ ಸಮಯ, ಟಿಕೆಟ್ ದರ
1. ವೋಲ್ವೋ ಎಸಿ ಬಸ್: ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಪ್ರಯಾಣ ಬೆಳೆಸುತ್ತದೆ. ಮಧ್ಯಾಹ್ನ 1-30ಕ್ಕೆ ಜೋಗಫಾಲ್ಸ್ ಗೆ ತಲುಪುತ್ತದೆ. ಜೋಗಫಾಲ್ಸ್ ನಿಂದ ಸಂಜೆ 4-00 ಗಂಟೆಗೆ ಮರಳಿ ಪ್ರಯಾಣ ಆರಂಭಿಸಿ ಹುಬ್ಬಳ್ಳಿಗೆ ರಾತ್ರಿ 9ಕ್ಕೆ ಆಗಮಿಸುತ್ತದೆ.
* ಟಿಕೆಟ್ ಬೆಲೆ ಎಷ್ಟು: ಈ ಎಸಿ ವೊಲ್ವೋ ಬಸ್ ಒಟ್ಟು ಪ್ಯಾಕೇಜ್ (ಎರಡು ದಿಕ್ಕಿನ ಸಂಚಾರ) ದರ 700 ರೂಪಾಯಿ ನಿಗದಿಪಡಿಸಲಾಗಿದೆ.
2. ವೇಗದೂತ ಬಸ್: ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಗಂಟೆಗೆ ಹೊರಡುತ್ತದೆ. ಜೋಗಫಾಲ್ಸ್ ಗೆ ಮಧ್ಯಾಹ್ನ 1-30ಕ್ಕೆ ತಲುಪುತ್ತದೆ. ಮರಳಿ ಜೋಗಫಾಲ್ಸ್ ನಿಂದ ಸಂಜೆ 4 ಗಂಟೆಗೆ ಹೊರಟು ಹುಬ್ಬಳ್ಳಿಗೆ ರಾತ್ರಿ 9.30ಕ್ಕೆ ಹುಬ್ಬಳ್ಳಿಗೆ ಬರುತ್ತದೆಲಿ
* ವೇಗದೂತ ಬಸ್ ಪ್ರಯಾಣ ದರ: ಎರಡು ದಿಕ್ಕಿನ ಪ್ರಯಾಣ ಸೇರಿ ಒಟ್ಟು 500 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಡ ಟಿಕೆಟ್ ಬುಕ್ ಮಾಡಿ ರಿಯಾಯಿತಿ ಪಡೆಯಿರಿ
ಜೋಗ ನೋಡಬೇಕೆನ್ನು ಪ್ರವಾಸಿಗರು, ಪ್ರಯಾಣಿಕರು ನೀವು ಕೂಡಲೇ ಅಧಿಕೃತ www.ksrtc.in ವೆಬ್ ಸೈಟ್ ಮೂಲಕ ಅಥವಾ KSRTC Mobile App ಮೂಲಕ ಇಲ್ಲವೇ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಒಮ್ಮೆಲೆ ನಾಲ್ಕು ಜನರ ಅಥವಾ ಅದಕ್ಕೂ ಹೆಚ್ಚಿನ ಸೀಟು ಬುಕ್ ಮಾಡಿದರೆ ಟಿಕೆಟ್ ದರದಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗುತ್ತದೆ ಎಂದು ಪ್ರಕಟಣೆಯಲ್ಲಿ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ.














Click it and Unblock the Notifications