ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಸದಸ್ಯರ ಬಲ!
ಬೆಂಗಳೂರು, ಜುಲೈ 08 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಬಿಜೆಪಿಯ ಶಾಸಕರ ಬಲ 106ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮೈತ್ರಿ ಸರ್ಕಾರ ಪತನಗೊಳ್ಳುವ ಆತಂಕ ಎದುರಾಗಿದೆ.
ಕಳೆದ ತಿಂಗಳು ಜೆಡಿಎಸ್ ಕೋಟಾದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಚ್.ನಾಗೇಶ್ ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ. ಸೋಮವಾರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂಬೈ ವಿಮಾನ ಏರಲು ಸಿದ್ಧರಾಗಿದ್ದಾರೆ.
ಮಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರ ಎಚ್.ನಾಗೇಶ್ ಅವರನ್ನು ಸಚಿವ ಸಂಪುಟಕ್ಕೆ ಕಳೆದ ತಿಂಗಳು ಸೇರಿಸಿಕೊಳ್ಳಲಾಗಿತ್ತು. ಸಣ್ಣ ಕೈಗಾರಿಕಾ ಖಾತೆಯನ್ನು ನೀಡಲಾಗಿತ್ತು. ಆದರೆ, ಅವರು ಈಗ ಬಿಜೆಪಿ ಸೇರಲು ಮುಂದಾಗಿದ್ದಾರೆ.
ಕಾಂಗ್ರೆಸ್‌ನ 9, ಜೆಡಿಎಸ್ 3 ಶಾಸಕರ ರಾಜೀನಾಮೆ ಬಳಿಕ ಮೈತ್ರಿ ಸರ್ಕಾರದ ಮ್ಯಾಜಿಕ್ ನಂಬರ್ 210ಕ್ಕೆ ಇಳಿಕೆಯಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 105 ಸದಸ್ಯ ಬಲವಾಗಿತ್ತು. ಬಿಜೆಪಿ 105 ಶಾಸಕ ಬಲ ಹೊಂದಿತ್ತು. ಈಗ ಬಿಜೆಪಿ ಬಲ 106ಕ್ಕೆ ಏರಿಕೆಯಾಗಿದೆ.

ಮೊದಲ ಬಾರಿ ಶಾಸಕರಾಗಿ ಆಯ್ಕೆ
ಸಚಿವ ಸ್ಥಾನಕ್ಕೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ನಾಗೇಶ್ ಮೈತ್ರಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ್ದರು. ಈಗ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಪಟ್ಟು ಹಿಡಿದು ಸಚಿವ ಸ್ಥಾನ ಪಡೆದಿದ್ದರು
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಪ್ತರಾದ ಎಚ್.ನಾಗೇಶ್ ಜೂನ್ 14ರಂದು ನಡೆದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಪಡೆದಿದ್ದರು. 'ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಸಚಿವ ಸ್ಥಾನಬೇಕು' ಎಂದು ಪಟ್ಟು ಹಿಡಿದು ಸಂಪುಟ ಸೇರಿದ್ದರು. ಈಗ ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟಿದ್ದರು.

ರಾಜ್ಯಪಾಲರ ಭೇಟಿಗೆ ತೀರ್ಮಾನ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು 12.10ಕ್ಕೆ ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಕೇಳಿದ್ದಾರೆ. ಉಭಯ ನಾಯಕರು ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಅಲ್ಪ ಮತಕ್ಕೆ ಕುಸಿದ ಸರ್ಕಾರ
224 ಸದಸ್ಯ ಬಲದ ವಿಧಾನಸಭೆಯ ಮ್ಯಾಜಿಕ್ ನಂಬರ್ 9 ಕಾಂಗ್ರೆಸ್, 3 ಜೆಡಿಎಸ್ ರಾಜೀನಾಮೆ ಬಳಿಕ 210ಕ್ಕೆ ಕುಸಿದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 105 ಸದಸ್ಯ ಬಲವಾಗಿತ್ತು. ಬಿಜೆಪಿ 105 ಶಾಸಕ ಬಲ ಹೊಂದಿತ್ತು. ಈಗ ಎಚ್.ನಾಗೇಶ್ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಬಳಿಕ ಬಿಜೆಪಿ ಬಲ 106ಕ್ಕೆ ಏರಿಕೆಯಾಗಿದೆ.












Click it and Unblock the Notifications