DK Shivakumar : ಡಿಕೆ ಶಿವಕುಮಾರ್ ನಾಮಪತ್ರ ಪುರಸ್ಕೃತ: ಮಾನಸಿಕ ಯುದ್ಧದಲ್ಲಿ ಗೆದ್ದ ಡಿಕೆಶಿ
ಬೆಂಗಳೂರು, ಏಪ್ರಿಲ್. 21: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಾಮಪತ್ರ ಅಂಗೀಕಾರವಾಗಿದೆ. ಅಂದರೆ ಗುರುವಾರದಿಂದ ರಾಜ್ಯ ರಾಜಕೀಯದಲ್ಲಿ ಉಂಟಾಗಿದ್ದ ಬಿರುಗಾಳಿ ತಣ್ಣಗಾಗಿದೆ. ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರು ಮತ್ತು ಕಾಂಗ್ರೆಸ್‌ಗೆ ಕನಕಪುರದ ಕೈ ಅಭ್ಯರ್ಥಿ ದೊರೆತಾಗಿದೆ.
ಇದು ಬರೀ ನಾಮಪತ್ರ ಅಂಗೀಕಾರವಾಗಿರಲಿಲ್ಲ. ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನಕ್ಕೆ ಸಿಕ್ಕ ಅಂಗೀಕಾರ ಎಂದರೇ ತಪ್ಪಾಗುವುದಿಲ್ಲ. ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿ ಡಿಕೆ ಶಿವಕುಮಾರ್ ಕನಕಪುರವನ್ನು ಬಿಟ್ಟು ಕೊಡಲು ತಯಾರಿರಲಿಲ್ಲ. ಇದೇ ಕಾರಣಕ್ಕೆ ತಮ್ಮ ಸಹೋದರ ಸಂಸದ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿದ್ದರು. ಡಿಕೆಶಿ ತೆಗೆದುಕೊಂಡ ಮುಂಜಾಗ್ರತೆ ಮಾತ್ರ ಮೆಚ್ಚಿಕೊಳ್ಳುವಂತಹದ್ದು.

ಬಿಜೆಪಿ ಸರ್ಕಾರ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂಬ ಆರೋಪಗಳನ್ನು ಮಾಡುತ್ತಲೇ ಜನರ ಕನಿಕರವನ್ನು ಗೆದ್ದು ಕನಕಪುರದಲ್ಲಿ ತಮ್ಮ ಸಾಮ್ರಾಜ್ಯವನ್ನೇ ವಿಸ್ತರಿಸಿದ್ದಾರೆ. ಇಂತಹ ನಾಯಕರನ ನಾಮಪತ್ರ ತಿರಸ್ಕರಿಸಿದ್ದರೇ ಜನರೇ ಆತನನ್ನು ದೇವರು ಎಂಬಂತೆ ಬಿಂಬಿಸುತ್ತಿದ್ದರು. ಇದು ಈಗಾಗಲೇ ಡಿಕೆಶಿ ಬಂಧನದ ವಿಷಯದಲ್ಲಿ ನಡೆದಿದೆ.
ಚುನಾವಣೆ ಗೆಲ್ಲುವ ಮೊದಲೇ ಡಿಕೆಶಿ ನಾಮಪತ್ರ ಅಗೀಕಾರ ವಿಷಯದಲ್ಲಿ ಗೆಲುವು ದಾಖಲಿಸಿದ್ದಾರೆ. ಅಂದರೇ ಇಲ್ಲಿ ಮಾನಸಿಕವಾಗಿ ಗೆದ್ದಂತೆಯೇ ಸರಿ. ಈಗಾಗಲೇ ಭಾವನಾತ್ಮಕವಾಗಿ ಡಿಕೆಶಿ ಪರವಾಗಿದ್ದ ಮತದಾರ ಮತ್ತಷ್ಟು ಹತ್ತಿರವಾಗುತ್ತಿದ್ದಾನೆ. ಸೋಲಿಲ್ಲದ ಸರದಾರ ಎಂಬ ಬಿರುದು ಕೊಟ್ಟಿರುವ ಜನರು ಮತ್ತೊಮ್ಮೆ ಗೆಲ್ಲಿಸುತ್ತಾರೆ. ಆದರೆ, ಇಲ್ಲಿ ಡಿಕೆಶಿ ಮಾನಸಿಕವಾಗಿ ಸದೃಢವಾಗಬೇಕಿತ್ತು. ಅದಕ್ಕೆ ಈ ನಾಮಪತ್ರ ಅಂಗೀಕಾರ ಹುರುಪು ನೀಡಿದೆ.

ಡಿಕೆಶಿ ಅವರ ಮತಬ್ಯಾಂಕ್ ಹೊಡೆಯಲು ಬಿಜೆಪಿ ಹಲವು ತಂತ್ರ ನಡೆಸುತ್ತಿದೆ. ಅದರಲ್ಲಿ ಒಂದು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಇಲ್ಲಿ ಕಣಕ್ಕಿಳಿಸಿರುವುದು ಕೂಡ. ಆದರೆ, ಈಗ ಮತ್ತೆ ಮಾನಸಿಕವಾಗಿ ಗೆದ್ದಿರುವ ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು ಆರ್.ಅಶೋಕ್ ಅವರಿಗೆ ಹೆಚ್ಚು ಕಷ್ಟವಾಗಲಿದೆ.
*ತಮ್ಮ ಡಿಕೆ ಸುರೇಶ್ ಬೆಂಬಲ*
ಡಿಕೆ ಶಿವಕುಮಾರ್ ಅವರ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಅವರ ಸಹೋದರ, ಸಂಸದ ಡಿಕೆ ಸುರೇಶ್. ರಾಜ್ಯದಲ್ಲಿ ಕಾಂಗ್ರೆಸ್ ಎಂಪಿಯಾಗಿ ಇರುವ ಒಬ್ಬರೇ ಒಬ್ಬರು ಸುರೇಶ್. ಆದರೆ, ಅಣ್ಣನ ಸ್ಥಾನಕ್ಕೆ ತೊಂದರೆಯಾಗಬಹುದು ಎಂಬ ಒಂದು ಚಿಕ್ಕ ಸುಳಿವಿನಲ್ಲೇ ತನ್ನ ಸ್ಥಾನವನ್ನು ಬಿಟ್ಟು ರಾಜ್ಯ ರಾಜಕೀಯಕ್ಕೆ ಧುಮುಕಲು ಸಿದ್ದವಾದವರು. ಇವರು ಕೂಡ ಡಿಕೆ ಶಿವಕುಮಾರ್ ವಾರ ಗೆಲುವುಗೆ ರೂವಾರಿಯಾಗುತ್ತಾರೆ.
ಈ ಹಿಂದ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾದರೆ ಉಂಟಾಗುವ ಲಾಭ - ನಷ್ಟಗಳ ಲೆಕ್ಕಾಚಾರ ಶುರುವಾಗಿತ್ತು. ಡಿಕೆ ಶಿವಕುಮಾರ್ ಮುಂಜಾಗ್ರತ ಕ್ರಮವಾಗಿ ಈಗಾಗಲೇ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಿ ನಾಮಪತ್ರ ಸಲ್ಲಿಸಿದ್ದರು. ಆ ಲಾಭ - ನಷ್ಟದ ಲೆಕ್ಕಾಚಾರದಲ್ಲೂ ಕೂಡ ಇದರಿಂದ ಅಣ್ಣ- ತಮ್ಮನ ಪ್ರಭಾವ ಹೆಚ್ಚಾಗಲಿದೆ ಎಂಬುದೇ ತಿಳಿದು ಬಂದಿತ್ತು.
ಒಂದು ವೇಳೆ ಚುನಾವಣಾ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರೇ ಅದರಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗುತ್ತಿತ್ತು. ಹೌದು. ಇದು ಆಶ್ಚರ್ಯವಾದರೂ ಸತ್ಯ. ಈಗಾಗಲೇ ಇಡಿ, ಐಟಿ, ಸಿಬಿಐ ದಾಳಿಗಳಿಂದ ವರ್ಷಗಳಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಬಗ್ಗೆ ಈಗಾಗಲೇ ಕನಕಪುರದ ಜನರು ಭಾವುಕರಾಗಿದ್ದಾರೆ. ಶಿವಕುಮಾರ್ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಂದರೆ ನೀಡುತ್ತಿವೆ ಎಂದು ಬಹಿರಂಗವಾಗಿಯೇ ಜನ ಮಾತಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗಿದ್ದರೇ ಮತ್ತೆ ಜನರು ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದರು.
ಹೀಗಾಗಿ ಡಿಕೆ ಶಿವಕುಮಾರ್ ಅವರ ನಾಮಪತ್ರ ಅಂಗೀಕಾರವಾಗಿರುವುದು ಅವರು ಮಾನಸಿಕ ಯುದ್ಧದಲ್ಲಿ ಗೆದ್ದಂತೆಯೇ. ಇನ್ನು ಚುನಾವಣೆಯಲ್ಲಿ ಗೆಲ್ಲಬೇಕಷ್ಟೇ. ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಅವರನ್ನು ಕನಕಪುರ ಕ್ಷೇತ್ರದ ಜನತೆ ಬಿಟ್ಟುಕೊಡುವುದಿಲ್ಲ ಎಂಬುದನ್ನು ಹಲವು ಸಮೀಕ್ಷೆಗಳು ಬಹಿರಂಗಪಡಿಸಿವೆ.












Click it and Unblock the Notifications