ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
No Train to Mangaluru Row: ಮಂಗಳೂರಿಗೆ ರೈಲು ಬರುವುದಿಲ್ಲ ಎನ್ನುವ ಕೇರಳ ಲಾಬಿ ಹಾಗೂ ಸುಳ್ಳುಗಳಿಂದ ಕರ್ನಾಟಕದ ಕರಾವಳಿ ಜನರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಮುಖ್ಯವಾಗಿ ಕೇರಳದ ಲಾಬಿ ಮತ್ತು ಸುಳ್ಳುಗಳಿಂದ ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯವಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.
ಮಂಗಳೂರಿಗೆ ರೈಲು ಬರಲ್ಲ ಎಂಬ ಕೇರಳದ ಲಾಬಿ, ಸುಳ್ಳುಗಳಿಂದ ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಭಾರೀ ಅನ್ಯಾಯವಾಗುತ್ತಿದೆ ಎನ್ನುವ ಬರಹ ವೈರಲ್ ಆಗಿದ್ದು, ಈ ಬರಹವನ್ನು ಹಿರಿಯ ಪತ್ರಕರ್ತರಾದ ರವಿಕಾಂತ ಕುಂದಾಪುರ ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು - ಉಡುಪಿ ರೈಲುಗಳು ಮಂಗಳೂರಿಗೆ ಬರುತ್ತಿಲ್ಲ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹರಡಲಾಗುತಿದ್ದು, ಬೆಂಗಳೂರಿಂದ ಉಡುಪಿ ಕಾರವಾರ ಕಡೆ ಹೋಗುವ ರೈಲುಗಳು ನಗರಕ್ಕೆ ಹೆದ್ದಾರಿ ಸಂಪರ್ಕ ಕೊಡುವ ಪರಂಗೀಪೇಟೆಗೆ ಬಂದು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಇರುವ ಪಡೀಲ್ ಮೂಲಕ ಕುಲಶೇಖರಕ್ಕೆ ಬಂದು ನಗರದ ಪ್ರಮುಖ ಜಾಗ ಕೂಳೂರಿಂದ 5 ಕಿ.ಮೀ. ಅಂತರದಲ್ಲಿ ಬಜ್ಪೆಗೆ ಅತಿ ಸಮೀಪದ ದೊಡ್ಡ ನಿಲ್ದಾಣ ಜೋಕಟ್ಟೆ ಮೂಲಕ ಕೊಂಕಣ ರೈಲ್ವೆ ಟರ್ಮಿನಲ್ ಮಂಗಳೂರು ನಾರ್ತ್ ಸುರತ್ಕಲ್ ತಲುಪಿ, ಉಡುಪಿ-ಕಾರವಾರ ಕಡೆ ಸಂಚರಿಸುತ್ತವೆ.
ಮಂಗಳೂರಿನ ಇಷ್ಟೆಲ್ಲ ಪ್ರಮುಖ ಜಾಗಗಳ ಮೂಲಕ ರೈಲು ಓಡಿದರೂ ಮಂಗಳೂರು ಜಂಕ್ಷನ್ ಮೂಲಕವೇ ಓಡಬೇಕು ಎಂಬ ಕೇರಳ ಲಾಬಿಗಳ ಹುನ್ನಾರದಿಂದ, ರೈಲುಗಳು ಮಂಗಳೂರಿನೊಳಗೆ ಬರುವುದಿಲ್ಲ ಎಂಬ ಸುಳ್ಳಿನಿಂದಾಗಿ ರೈಲುಗಳು ಕೇರಳದ ಕಡೆ ಮುಖ ಮಾಡಿ ನಗರದೊಳಗೆ ಬಂದು ರೈಲು ತೆವಳುತ್ತ ಸಿಗ್ನಲ್ ಪ್ಲ್ಯಾಟ್ ಫಾರಂ ಸಿಗದೇ ಕಾದು ಕಾದು ನಗರ ಪ್ರದಕ್ಷಿಣಿ ಮಾಡಿ ಮಂಗಳೂರು ಜಂಕ್ಷನ್ ತಲುಪಿ ಇಂಜಿನ್ ಬದಲಾಯಿಸಿ ಮತ್ತೆ ಪುನಃ ಅದೇ ಜೋಕಟ್ಟೆ ಮಂಗಳೂರು ನಾರ್ತ್‌ಗೆ ಬಂದು ಸೇರುವಾಗ ಸುರತ್ಕಲ್ ಉಡುಪಿ ಕಾರವಾರ ಭಾಗದವರ ಅನಾಮತ್ತು 2ರಿಂದ 3 ಗಂಟೆ ವ್ಯರ್ಥವಾಗುತ್ತದೆ ಎಂದು ತುಳುನಾಡು ಕರಾವಳಿ ರೈಲ್ವೆ ಬಳಕೆದಾರರು ದೂರಿದ್ದಾರೆ.
ಇತ್ತೀಚಿಗೆ ಪಡೀಲ್ ಜೋಕಟ್ಟೆ ಮಂಗಳೂರು ನಾರ್ತ್ ನೇರ ಮಾರ್ಗದ ಶಿವರಾತ್ರಿ ವಿಶೇಷ ಬೆಂಗಳೂರು - ಮಂಗಳೂರು - ಕಾರಾವಾರ ರೈಲನ್ನು ಪ್ರಭಾವ ಬಳಸಿ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವಂತೆ ಮಾಡಿದ ಕೇರಳದ ಲಾಬಿಯಿಂದಾಗಿ 11.30ಕ್ಕೆ ಮಂಗಳೂರು ನಾರ್ತ್ ಸುರತ್ಕಲ್ ತಲುಪಬೇಕಾದ ಗಾಡಿ ರಾತ್ರಿ 12.50ಕ್ಕೆ, ರಾತ್ರಿ12.30ಕ್ಕೆ ಉಡುಪಿಗೆ ಬರ ಬೇಕಾದ ರೈಲು ಮಧ್ಯರಾತ್ರಿ 2.20ಕ್ಕೆ, 1 ಗಂಟೆಗೆ ಕುಂದಾಪುರ ಬರಬೇಕಾಗಿದ್ದ ರೈಲು 2.50ಕ್ಕೆ ಕುಂದಾಪುರ ತಲುಪಿ ಪ್ರಯಾಣಿಕರಿಗೆ ಸಮಯ ಹಾಳು ಮಾಡಿತ್ತು.
ಪಡೀಲ್, ಜೋಕಟ್ಟೆ, ಮಂಗಳೂರು ನಾರ್ತ್, ಸುರತ್ಕಲ್, ನಿರ್ಮಾಣವಾಗಲಿರುವ ಪರಂಗೀಪೇಟೆ.. ಇಲ್ಲೆಲ್ಲ ನಿಲುಗಡೆ ಪಡೆದು ಬೇಗನೆ ಮಂಗಳೂರಿನ ವಿವಿಧೆಡೆಗೆ ತಲುಪಲು ಸಾಧ್ಯವಿದ್ದೂ, ಪ್ರತಿ ರೈಲೂ ಮತ್ತೆ ಮಂಗಳೂರು ನಗರದೊಳಗೆ ಬರಲೇಬೇಕೇಂಬ ಕಾರಣದಿಂದ ಕರಾವಳಿ ಕರ್ನಾಟಕದ ಜನ ರೈಲಿಂದ ದೂರಾಗುವಂತಾಗಿದ್ದು, ಆಗ ಈ ರೈಲುಗಳನ್ನು ಕೇರಳದ ಕಡೆ ಓಡಿಸುವ ಯೋಜನೆಯಂತೆ ಇದು ಭಾಸವಾಗುತ್ತಿದೆ ಎಂಬುದು ಉಡುಪಿ ಭಾಗದವರ ಆರೋಪ.
ಬೆಂಗಳೂರು ಮಂಗಳೂರು ಉಡುಪಿ ರೈಲುಗಳಲ್ಲಿ ಈಗ ಪಂಚಗಂಗಾ ಪಡೀಲ್ ಮೂಲಕ 9 ಗಂಟೆ ತೆಗೆದುಕೊಂಡರೆ ಹಗಲು ರೈಲು ಮಂಗಳೂರು ಜಂಕ್ಷನ್ ಮೂಲಕ 11.30 ಗಂಟೆ ಹಾಗೂ ಮೈಸೂರು ಮಾರ್ಗದ ರೈಲು ಮಂಗಳೂರು ಸೆಂಟ್ರಲ್ ಮೂಲಕ ಸುಮಾರು 14.50 ಗಂಟೆ ಪ್ರಯಾಣದ ಅವಧಿ ಹೊಂದಿದೆ.
ಮಂಗಳೂರಿಂದ ಆರಂಭವಾಗುವ ರೈಲುಗಳು ಜಂಕ್ಷನ್‌ನಿಂದಲೇ ಆರಂಭವಾಗಲಿ. ಆದರೆ, ಉಡುಪಿ ಕಾರವಾರ ಕಡೆ ರೈಲುಗಳು ಮಂಗಳೂರಿನದ್ದೇ ಪ್ರಮುಖ ಭಾಗಗಳಾದ ಪಡೀಲ್, ಜೋಕಟ್ಟೆ, ಮಂಗಳೂರು ನಾರ್ತ್, ಸುರತ್ಕಲ್ ಮೂಲಕವೇ ಸಾಗಲಿ. ಇದರಿಂದ ಎಲ್ಲರಿಗೂ ಸಮಯ ಉಳಿತಾಯ ಎಂಬುದು ಉಡುಪಿ-ಕುಂದಾಪುರ ಕಡೆಯವರ ಬೇಡಿಕೆ.













Click it and Unblock the Notifications