ಸರ್ಕಾರ ಉರುಳಿಸಲು ಪ್ರಾಣಿ ಬಲಿ ಆರೋಪ: ಕೇರಳದ ಶ್ರೀರಾಜರಾಜೇಶ್ವರ ದೇವಾಲಯದಿಂದ ಸ್ಪಷ್ಟನೆ
ಮಂಗಳೂರು, ಜೂನ್ 01: ಕೇರಳದ ಶ್ರೀರಾಜರಾಜೇಶ್ವರ ದೇವಾಲಯ ಆಸುಪಾಸಿನಲ್ಲಿ ನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಕೇರಳದ ತಾಳಿಪರಂಬ ಶ್ರೀರಾಜರಾಜೇಶ್ವರ ದೇವಸ್ಥಾನ ಆಡಳಿತ ಮಂಡಳಿ ತಿರುಗೇಟು ನೀಡಿದೆ.
ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ ಎಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಾಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ. ಶ್ರೀ ರಾಜರಾಜೇಶ್ವರ ದೇವಸ್ಥಾನವು ಕೇರಳದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಹಿತಾಸಕ್ತಿಗಳ ವಿರುದ್ಧದ ಪ್ರಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ.
ಕಣ್ಣೂರು ತಳಿಪರಂಬ ಶ್ರೀರಾಜರಾಜೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪೂಜೆ ಅಥವಾ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ ಎಂದು ಅಧಿಕೃತ ಪತ್ರಿಕಾ ಹೇಳಿಕೆ ಮೂಲಕ ದೇವಾಲಯದ ಆಡಿತ ಮಂಡಳಿ ಸ್ಪಷ್ಟನೆ ನೀಡಿದೆ.
ಸಿಎಂ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಬಲಿ ಕೊಟ್ಟಿದ್ದಾರೆ. ಕೇರಳದ ಶ್ರೀರಾಜರಾಜೇಶ್ವರ ದೇವಸ್ಥಾನದ ಆಸು ಪಾಸಿನಲ್ಲಿ ವಿಚಾರಿಸಿ, ನಿಮಗೆ ಗೊತ್ತಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು.












Click it and Unblock the Notifications