ಕರ್ನಾಟಕದಲ್ಲಿ ಎಸಿ ಸ್ಲೀಪರ್ ಬಸ್‌ಗಳಿಗೆ 8 ಕಡ್ಡಾಯ ನಿಯಮಗಳು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಮಾಹಿತಿ
Private Buses New Safety Guidelines: ಬೆಂಗಳೂರು ನಗರ ಸೇರಿ ಹಲವು ಭಾಗಗಳಲ್ಲಿ ಎಸಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿದ್ದು, ಪ್ರಯಾಣಿಕರು ಪ್ರಾಣ ಕಳೆದುಕೊಂಡ ದುರ್ಘಟನೆಗಳು ನಡೆದಿವೆ. ಇತ್ತೀಚೆಗಷ್ಟೇ ಚಿತ್ರದುರ್ಗದ ಬಳಿ ಖಾಸಗಿ ಬಸ್ ಸುಟ್ಟು ಭಸ್ಮವಾಗಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಮೇರೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ಖಾಸಗಿ ಬಸ್ ಮಾಲೀಕರು, ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಈ ವೇಳೆ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವೆಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ವಿವರಿಸಿದ್ದಾರೆ.

ಪ್ರಯಾಣಿಕರಿಗೆ ಏನೆಲ್ಲಾ ಮಾಹಿತಿ ನೀಡಬೇಕು?: ಫೈರ್ ಎಸ್ಟಿಂಗ್ ವಿಷರ್‌ಗಳನ್ನು ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ನೀಡಬೇಕು, ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು?, ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್‌ಗಳನ್ನು ಹೇಗೆ ಇಡಬೇಕು? ಎಂದು ವಿವರಿಸಿದ್ದಾರೆ.
ಅಲ್ಲದೆ, ಪ್ರಯಾಣಿಕರು ಬೆಂಕಿ ಸಂಭವಿಸಿದ ವೇಳೆ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು. ಬೆಂಕಿ ಕಾಣಿಸಿಕೊಂಡ ವೇಳೆ ಪ್ರಯಾಣಿಕರಿಗೆ ಚಾಲಕ ಮುಂಜಾಗ್ರತಾ ಕ್ರಮವಾಗಿ ಅಲರಾಂ ನೀಡಬೇಕು. ಹೀಗೆ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚನೆ ನೀಡಿದ್ದಾರೆ.
ಸ್ಲೀಪರ್ ಬಸ್‌ಗಳಿಗೆ ಕಡ್ಡಾಯ ನಿಯಮಗಳು
* ಚಾಲಕನ ಹಿಂಬದಿ ಡೋರ್ ಕಡ್ಡಾಯ
* ಸ್ಲೀಪರ್ ಬರ್ತ್‌ಗಳಲ್ಲಿ ಸ್ಲೈಡರ್ ತೆರವು
* ಫೈರ್ ಡಿಟೆಕ್ಷನ್ ಸಿಸ್ಟಮ್ ಅಳವಡಿಕೆ
* 10 ಕೆ.ಜಿ ತೂಕದ ಅಗ್ನಿಶಾಮಕ ಸಾಧನ ಅಳವಡಿಕೆ
* ಚಾಸಿಸ್ ಅನಧಿಕೃತ ವಿಸ್ತರಣೆಗೆ ತಡೆ
* ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ
* ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್‌ಸಿ ಮಾಡಬೇಕು
* ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರ ನೋಂದಣಿ ಮಾಡಬೇಕು
ಮಾನದಂಡಗಳ ವಿವರಣೆ
* ಅಪಘಾತ ಸಂಭವಿಸಿದಾಗ ಚಾಲಕನಿಗೆ ಹಾಗೂ ಮುಂಭಾಗದ ಪ್ರಯಾಣಿಕರಿಗೆ ಸುಲಭವಾಗಿ ಹೊರಬರಲು ಚಾಲಕನ ಸೀಟಿನ ಹಿಂಬದಿಯ ಡೋರ್ ಇರಬೇಕಾಗುತ್ತದೆ.
* ಸ್ಲೀಪರ್ ಬರ್ತ್‌ಗಳಲ್ಲಿ ಸುರಕ್ಷತೆಗೆ ಅಡ್ಡಿ ಆಗುವಂತಹ ಸ್ಲೈಡರ್‌ಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು.
* ಬೆಂಕಿ ಕಾಣಿಸಿಕೊಂಡ ತಕ್ಷಣ ಪತ್ತೆ ಹಚ್ಚುವ ಫೈರ್ ಡಿಟೆಕ್ಷನ್ ತಂತ್ರಜ್ಞಾನವನ್ನು ಒಂದು ತಿಂಗಳ ಒಳಗೆ ಎಲ್ಲಾ ಬಸ್‌ಗಳಲ್ಲಿ ಅಳವಡಿಕೆ ಮಾಡಬೇಕು.
* ಪ್ರತಿ ಬಸ್‌ನಲ್ಲಿ ಕನಿಷ್ಠ 10 ಕೆ.ಜಿ. ತೂಕದ ಅಗ್ನಿಶಾಮಕ ಸಾಧನ ಇರಬೇಕಾಗುತ್ತದೆ.
* ಬಸ್‌ನ ಚಾಸಿಸ್ ಅನ್ನು ನಿಯಮ ಮೀರಿ ಅನಧಿಕೃತವಾಗಿ ವಿಸ್ತರಣೆ ಮಾಡುವಂತಿಲ್ಲ.
* ಅನುಮೋದಿತ ಟೆಸ್ಟಿಂಗ್ ಏಜೆನ್ಸಿಗಳಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದ ಬಸ್‌ಗಳಿಗೆ ಮಾತ್ರ ರಸ್ತೆಗಿಳಿಯಲು ಅವಕಾಶ ಇರುತ್ತದೆ.
* ಪ್ರಯಾಣಿಕರ ಸುರಕ್ಷತಾ ಮಾನದಂಡಗಳು ಪೂರ್ಣ ಪ್ರಮಾಣದಲ್ಲಿ ಇದ್ದರೆ ಮಾತ್ರ ಬಸ್‌ಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ನೀಡಲಾಗುವುದು.
* ಬಸ್ ಕವಚ ನಿರ್ಮಾಣ ಮಾಡಿದ ಸಂಸ್ಥೆಯ ಸಿಂಧುತ್ವವನ್ನು ಪರಿಶೀಲಿಸಿದ ನಂತರವೇ ಹೊಸ ಬಸ್‌ಗಳ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಉಲ್ಲೇಖಿಸಲಾಗಿದೆ. ಇವೆಲ್ಲಾ ನಿಯಮಗಳನ್ನು ಕಡ್ಡಾಯವಾಗು ಪಾಲನೆ ಮಾಡಲೇಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳ ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶ ಇದೆ. ಆದರೆ, ವಾಹನವವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್‌ಸಿ ನೀಡಬೇಕೆಂಬ ನಿಯಮ ಇದೆ.












Click it and Unblock the Notifications