Darshan: ದರ್ಶನ ವಿಚಾರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದ್ದು ಹೀಗೆ?
ಬೆಂಗಳೂರು, ಜೂನ್ 15: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗಿದೆ. ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಸಂಕಷ್ಟದಲ್ಲಿ ಸಿಲುಕಿದ್ದು, ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಈ ಪ್ರಕರಣದ ಕುರಿತು ಮಾಧ್ಯಮಗಳ ಜೊತೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಇವತ್ತು ನಟ ದರ್ಶನ್ ವಿಚಾರದಲ್ಲಿ ಅವರ ರಕ್ಷಣೆ ಮಾಡುತ್ತಿರುವುದೇಕೆ? ಅವರಿರುವ ಜಾಗಕ್ಕೆ- ಪೊಲೀಸ್ ಠಾಣೆಗೆ ಈ ರೀತಿಯ ರಕ್ಷಣೆ ಒದಗಿಸಿದ್ದು, ಜನಸಾಮಾನ್ಯರಿಗೆ ಒಂದು ಕಾನೂನು, ದೊಡ್ಡವರಿಗೆ ಮತ್ತೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನೊಂದು ಕಾನೂನು ಎಂಬ ಸಂದೇಶವನ್ನು ರಾಜ್ಯದಲ್ಲಿ ನೀಡುತ್ತಿದೆ. ಕಾನೂನಿನನ್ವಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರಕಾರ ಅಥವಾ ಪೊಲೀಸರು ಕೊಲೆಗಡುಕರ ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.

ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎಗೆ ರಾಜ್ಯದ ಜನತೆ ಅದ್ಭುತವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಜ್ಯ ಸರಕಾರ ಹಲವಾರು ಅಪಪ್ರಚಾರ ಮಾಡಿದ್ದರೂ ಬಿಜೆಪಿಯ 17, ಎನ್‍ಡಿಎ ಸೇರಿದ್ದ ಜೆಡಿಎಸ್‍ನ ಇಬ್ಬರನ್ನು ಗೆಲ್ಲಿಸಿ 19 ಸೀಟುಗಳನ್ನು ನಾವು ಗೆದ್ದಿದ್ದೇವೆ ಎಂದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕೊನೆಗೂ ಡಬಲ್ ಡಿಜಿಟ್ ದಾಟಲು ಆಗಿಲ್ಲ. ಈ ಬಾರಿ ತಮಗೆ ಹೆಚ್ಚು ಜನರನ್ನು ತಲುಪಲು ಪೂರಕವಾದ ಎಂಎಸ್‍ಎಂಇ, ಕಾರ್ಮಿಕ ಮತ್ತು ಉದ್ಯೋಗ ಖಾತೆಯನ್ನು ಕೊಟ್ಟಿದ್ದಾರೆ ಎಂದು ವಿವರಿಸಿದರು ಹಾಗೂ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರು, ಮುಖಂಡರು ಮತ್ತು ಮತದಾರ ಬಾಂಧವರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ದೊಡ್ಡ ಪ್ರಮಾಣದಲ್ಲಿ ಕೈಗಳಿಗೆ ಉದ್ಯೋಗ ಕೊಡುವ ಇಲಾಖೆ ಎಂಎಸ್‍ಎಂಇ. ಅದನ್ನು ಬೆಳೆಸಬೇಕಿದೆ. ದೇಶದ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಕಿರು ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಪ್ರಕಟಿಸಿದರು.
ಸಂಘಟಿತ- ಅಸಂಘಟಿತ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ, ಕಟ್ಟಡ ಕಾರ್ಮಿಕರು, ಬೇರೆ ಬೇರೆ ವಲಯದ ಕಾರ್ಮಿಕರಿಗೆ ಅನುಕೂಲ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಯಡಿಯೂರಪ್ಪ ಅವರ ಮೇಲಿನ ಕೇಸಿನ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಉತ್ತಮವಾದ ರಾಜಕೀಯ ನೀಡಿದವರು. ಯಾವತ್ತೂ ಅವರ ಮೇಲೆ ಇಂಥ ಆರೋಪ ಬಂದಿಲ್ಲ. ಕೋರ್ಟ್ ಈ ನೆಲದ ಕಾನೂನನ್ನು ಎತ್ತಿ ಹಿಡಿಯಲಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ಎಲ್ಲರ ಮೇಲೆ ಕೇಸು ಹಾಕುವಂಥ ಪ್ರಕರಣವನ್ನೂ ಜನತೆ ಗಮನಿಸುತ್ತಿದ್ದಾರೆ. ಕಾದು ನೋಡೋಣ ಎಂದು ಉತ್ತರ ನೀಡಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಯಾರಿಗೂ ರಕ್ಷಣೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಕೊಲೆಗಳು ನಡೆಯುತ್ತಿವೆ. ಸರಕಾರ ಕೊಲೆಗಾರರ ಪರವಾಗಿ ನಿಂತಿರುವುದೇ ಈ ಎಲ್ಲ ಕೊಲೆಗಳಿಗೆ ಕಾರಣ ಎಂದು ಆರೋಪಿಸಿದರು. ಕೊಲೆಗಡುಕರಿಗೆ ಭಯ ಇಲ್ಲ ಎಂಬ ಸ್ಥಿತಿ ಈ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.












Click it and Unblock the Notifications