Namma Metro: ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಅತ್ತಿಬೆಲೆವರೆಗೂ ಮೆಟ್ರೋ ವಿಸ್ತರಣೆ: ಮಾಹಿತಿ ತಿಳಿಯಿರಿ
ಬೆಂಗಳೂರು, ಆಗಸ್ಟ್ 20: ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೀಗ ಅತ್ತಿಬೆಲೆವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಿ.ಶಿವಣ್ಣ ಅವರು, ನಮಗೆ ಹೊಸೂರು ಭಾಗದಿಂದ ಹೆಚ್ಚು ಸಂಚಾರ ದಟ್ಟಣೆ ಬರುತ್ತಿದ್ದು, ಇದನ್ನು ಕಡಿಮೆ ಮಾಡಲು ಅತ್ತಿಬೆಲೆ ಗಡಿವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸದನದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉತ್ತರಿಸಿ, ಶಾಸಕರಾದ ಶಿವಣ್ಣ ಅವರು ಕಳೆದ ಎರಡು ವರ್ಷಗಳಿಂದ ಈ ವಿಚಾರವಾಗಿ ನನ್ನ ಬೆನ್ನತ್ತಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿಗಳು ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. ಅವರ ಬೇಡಿಕೆ ಪ್ರಕಾರ ಇನ್ನು 10-12 ಕಿ.ಮೀ ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದರ ಅಗತ್ಯವಿದೆ.

ಇತ್ತೀಚೆಗೆ ಅವರ ಕ್ಷೇತ್ರದಲ್ಲಿ 90 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಅಲ್ಲಿಯವರೆಗೂ ಮೆಟ್ರೋ ತೆಗೆದುಕೊಂಡು ಹೋಗಬೇಕು. ಈ ಮಾರ್ಗವನ್ನು ಜಿಗಣಿ, ಬನ್ನೇರುಘಟ್ಟ ಮಾರ್ಗವಾಗಿ ತೆಗೆದುಕೊಂಡು ಹೋಗಲು ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಶಾಸಕರು ಪ್ರಸ್ತಾಪಿಸಿರುವ ಮೆಟ್ರೋ ಮಾರ್ಗಕ್ಕೆ ಹೈದರಾಬಾದ್ ನ ಆರ್.ವಿ ಅಸೋಸಿಯೇಟ್ಸ್ ಸಂಸ್ಥೆಗೆ ಡಿಪಿಆರ್ ಸಿದ್ಧಪಡಿಸಲು ತಿಳಿಸಿದ್ದೇವೆ. ಹಳದಿ ಮಾರ್ಗದ ಮೆಟ್ರೋದಲ್ಲಿ ನಿತ್ಯ 90 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಶಾಸಕರ ಮನವಿ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಇನೂ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೋನರೆಡ್ಡಿ ಅವರು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಅಲ್ಲಿನ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರನ್ನು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ. ಈ ವಿಚಾರವಾಗಿ ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು ತಿಳಿಸಿದರು.
ಇಡೀ ರಾಜ್ಯದ ಜನ ಪಕ್ಷಬೇಧ ಮರೆತು ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಇದರ ತೀರ್ಪು ಬಂದಿದ್ದು, ನಮ್ಮ ರಾಜ್ಯಕ್ಕೆ ಅಗತ್ಯ ಪಾಲಿನ ನೀರು ಹಂಚಿಕೆ ಮಾಡಲಾಗಿದೆ. 2022ರಲ್ಲಿ ಕೇಂದ್ರ ಜಲ ಆಯೋಗ ಕೂಡ ಈ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಹುಬ್ಬಳ್ಳಿ ಧಾರವಾಡದಲ್ಲಿ ಶಾಸಕರುಗಳು ಸೇರಿ ವಿಜಯೋತ್ಸವವನ್ನು ಆಚರಿಸಿದರು ಎಂದು ಹೇಳಿದರು.
ಈ ಮಧ್ಯೆ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಅವರು ನಮ್ಮ ರಾಜ್ಯಕ್ಕೆ ಹೇಗೆ ನೋಟೀಸ್ ನೀಡಲು ಸಾಧ್ಯ? ಕೆಲವು ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ನೋಟೀಸ್ ನೀಡಬಹುದು. ನಮ್ಮ ರಾಜ್ಯದ ಅಧಿಕಾರಿ ಬೇರೆ ರಾಜ್ಯಕ್ಕೆ ನೋಟೀಸ್ ನೀಡಲು ಸಾಧ್ಯವೇ? ನಾವು ಆ ನೋಟೀಸ್ ಗೆ ಹೆಚ್ಚು ಮಾನ್ಯತೆ ನೀಡದೇ ಯೋಜನೆ ಮುಂದುವರಿಸಬೇಕಿತ್ತು. ಆದರೆ ಆಗ ನಮ್ಮ ರಾಜ್ಯದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ, ಆ ನೋಟೀಸ್ ಕೊಡಲು ನೀನು ಯಾರು ಎಂದು ಪ್ರಶ್ನೆ ಮಾಡುತ್ತಿದ್ದೆ ಎಂದರು.












Click it and Unblock the Notifications