Narendra Modi: ಮೋದಿ ಗೆಲುವಿಗಾಗಿ ತನ್ನ ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಕರ್ನಾಟಕದ ಅಭಿಮಾನಿ
ಬೆಂಗಳೂರು, ಏಪ್ರಿಲ್ 08: ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಗೆಲುವು ಸಾಧಿಸಲು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ, ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡೂ ಒಕ್ಕೂಟಗಳು ಹರಸಾಹಸ ಪಡುತ್ತಿದೆ.
ಇತ್ತ ಪಕ್ಷಗಳ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರ ಅಭಿಮಾನಿಗಳು ಹಗಲು ಎನ್ನದೇ, ರಾತ್ರಿ ಎನ್ನದೇ, ಬಿಸಿಲು ಎನ್ನದೇ, ಮಳೆ ಎನ್ನದೇ ತಮ್ಮ ತಮ್ಮ ಪಕ್ಷದ ಪರ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಂತೂ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ದೇವರಿಗೆ ಹರಕೆಗಳನ್ನು ಹೊತ್ತು ತೀರಿಸುತ್ತಿದ್ದಾರೆ.

ಇತ್ತೀಚಿಗೆ ಪ್ರಧಾನಿ ಮೋದಿ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಲಿ ಎಂದು ಶತಾಯುಷಿ ಅಜ್ಜಿಯೊಬ್ಬರು ಮಲೆ ಮಹದೇಶ್ವರ ಬೆಟ್ಟ ಹತ್ತಿ ಹರಕೆ ತೀರಿಸಿದ ಘಟನೆಯ ಬಗ್ಗೆ ನೀವು ತಿಳಿದಿರಬಹುದು. ಇದೇ ರೀತಿ ಕರ್ನಾಟಕದಲ್ಲಿ ನೂರಾರು ಅಭಿಮಾನಿಗಳು ಮೋದಿ ಮತ್ತೊಮ್ಮೆ ಎಂದು ಪೂಜೆ ಹರಕೆಗಳನ್ನು ತೀರಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಂಧಾಭಿಮಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲೆಂದು ತನ್ನ ಕೈ ಬೆರಳನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದ ಅರುಣ್ ವರ್ಣೇಕರ್ ಎನ್ನುವಾತ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸಲ್ಲಿಸಿರುವ ಸೇವೆಯನ್ನು ಮನಸಾರೆ ಮೆಚ್ಚಿಕೊಂಡಿರುವ ಅರುಣ್ ವರ್ಣೇಕರ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಹೆಬ್ಬಕೆಯಲ್ಲಿದ್ದಾರೆ.
ಅರುಣ್ ವರ್ಣೇಕರ್ ಮನೆಯಲ್ಲಿ ಮೋದಿಗಾಗಿ ಗುಡಿಯನ್ನೇ ನಿರ್ಮಿಸಿ ಪ್ರತಿ ದಿನ ಪೂಜೆ ಮಾಡುತ್ತಿದ್ದಾರೆ. ಈ ಗುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆ ಇದ್ದು, ಮೋದಿ ಭಾರತ ಮಾತೆಯ ಆರಾಧಕ, ನಾನು ಮೋದಿ ಅವರ ಆರಾಧಕ ಎನ್ನುವ ಫಲಕವನ್ನು ಹಾಕಿದ್ದಾರೆ. ಇಷ್ಟರ ಮಟ್ಟಿಗೆ ಅಭಿಮಾನಿಯಾಗಿರುವ ಅರುಣ್ ವರ್ಣೇಕರ್, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬೆರಳು ತುಂಡು ಮಾಡಿಕೊಂಡು ರಕ್ತದಲ್ಲಿ 'ಮಾ ಕಾಳಿಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ, ಮೋದಿ ಬಾಬಾ ಪಿಎಂ, ತೀಸ್ರೀ ಬಾರ್, 378+, ಮೇರಾ ಮೋದಿ ಬಾಬಾ ಸಬಸೇ ಮಹಾನ್' ಎಂದು ರಕ್ತದಲ್ಲಿ ಗೋಡೆ ಹಾಗೂ ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.
ಅರುಣ್ ವರ್ಣೇಕರ್ 2014ರಲ್ಲಿ ನರೇಂದ್ರ ಮೋದಿ ಗೆಲುವಿಗಾಗಿ ರಕ್ತದಲ್ಲಿ ಸಾರ್ವಜನಿಕರಿಗೆ ಪತ್ರ ಬರೆದಿದ್ದರು. 2019ರಲ್ಲೂ ಮೋದಿ ಗೆಲುವಿಗಾಗಿ ಬಲಗೈ ಬೆರಳನ್ನು ಕತ್ತರಿಸಿ ಕಾಳಿಮಾತೆಗೆ ಅರ್ಪಿಸಿದ್ದರು ಎನ್ನಲಾಗಿದೆ. ಕಾಳಿಮಾತಾಗೆ ರಕ್ತ ಅರ್ಪಿಸಲು ಅರುಣ್ ವರ್ಣೇಕರ್ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದು, ಪೆಟ್ಟು ಬಲವಾಗಿ ಬಿದ್ದ ಕಾರಣ ಬೆರಳನ್ನು ಮತ್ತೆ ಜೋಡಿಸಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ ಕಾರಣ ಸದ್ಯ ಬೆರಳನ್ನೇ ಕತ್ತರಿಸಿ ತೆಗೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಲಿರುವ ಅರುಣ್ ವರ್ಣೇಕರ್ ಅವರ ಅಭಿಮಾನವನ್ನು ಕೆಲವರು ಮೆಚ್ಚಿದರೆ ಇನ್ನೂ ಕೆಲವರು ಅತಿರೇಖದ ವರ್ತನೆ ಎಂದಿದ್ದಾರೆ.












Click it and Unblock the Notifications