ಮತಗಳ್ಳತನದ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ, ಪ್ರಧಾನಿ ಕುರ್ಚಿಯಲ್ಲಿ ಮೋದಿಗೆ ಕೂರುವ ಹಕ್ಕಿಲ್ಲ: ರಾಜೀನಾಮೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು ಆಗಸ್ಟ್ 08: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಡೆದ ಚುನಾವಣಾ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಫ್ರೀಡಂಪಾರ್ಕ್ ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ. ಮತಗಳ್ಳತನದ ವಿರುದ್ಧ ಕರ್ನಾಟಕ ರಾಜ್ಯದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಚುನಾವಣಾ ಆಯೋಗ ಸಂವಿಧನದ ಅಡಿಯಲ್ಲಿ ನ್ಯಾಯಬದ್ದವಾಗಿ ನಡೆದುಕೊಳ್ಳಬೇಕು. ಸಂವಿಧಾನ ಕೊಟ್ಟಿರುವ ಮತದಾನದ ಮೂಲಭೂತ ಹಕ್ಕನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ದೇಶದ ಜನತೆ ಅವಕಾಶ ಕೊಡುವುದಿಲ್ಲ ಎಂದರು. ಮನುವಾದಿಗಳು ಸಂವಿಧಾನ ವಿರೋಧಿಗಳು. ಇವರು ಸಂವಿಧಾನದ ಪ್ರಕ್ರಿಯೆಯನ್ನೇ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಂಚನೆ ಕಾರಣದಿಂದ ಸೆಂಟ್ರಲ್ ಲೊಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದೆಯೇ ಹೊರತು ಜನಾಭಿಪ್ರಾಯ ಕಾಂಗ್ರೆಸ್ ಪರವಾಗಿಯೇ ಇತ್ತು ಎನ್ನುವುದು ಈಗ ಗೊತ್ತಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 14 ಸೀಟುಗಳನ್ನು ಗೆಲ್ಲಬೇಕಿತ್ತು. ಆದರೆ ಮತಕಳ್ಳತನದ ಕಾರಣದಿಂದ ನಾವು ಸೋತಿದ್ದೇವೆ. EVM ಬಂದ ಮೇಲೆ ಇವನ್ನು ದುರುಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿರುವುದು ಈಗ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ ಎಂದ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿಯಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಚಳವಳಿ ಆರಂಭವಾಗಿದೆ. ಇದಕ್ಕೆ ಇಡೀ ರಾಜ್ಯದ ಜನತೆ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಘೋಷಿಸಿದರು.
ಇನ್ನೂ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿ, ಬಿಜೆಪಿ ನಾಯಕರು ಪವಿತ್ರ ಗ್ರಂಥದ ಮೇಲೆ ಪ್ರಹಾರ ಮಾಡಿದ್ದಾರೆ, ಸಂವಿಧಾನವನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಸಮೀಕ್ಷೆಯ ಪ್ರಕಾರ ಕಳೆದ ಲೋಕಸಭಾ ಕ್ಷೇತ್ರದಲ್ಲಿ 16 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎನ್ನಲಾಗಿತ್ತು, ಆದರೆ ನಾವು ಗೆದ್ದಿದ್ದು 9 ಕ್ಷೇತ್ರಗಳಲ್ಲಿ ಮಾತ್ರ. ಬೆಂಗಳೂರು ಕೇಂದ್ರದ ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಮೋಸ ಮಾಡಿದೆ. ಆರು ಮತಗಳಲ್ಲಿ ಒಂದು ಮತ ಕಳ್ಳತನ ಮಾಡಿದ್ದಾರೆ. ಭಾವಚಿತ್ರವಿಲ್ಲದ 4 ಸಾವಿರ ಪ್ರಕರಣಗಳು ದೊರೆತಿವೆ. ಒಬ್ಬನೇ ಮತದಾರನಿಂದ ಹಲವು ರಾಜ್ಯಗಳಲ್ಲಿ ಮತದಾನವಾಗಿದೆ ಎಂದು ಆರೋಪಿಸಿದ್ದಾರೆ.
ಈ ಕಳ್ಳತನ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ನಡೆದಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಒಂದು ಕ್ಷೇತ್ರದಲ್ಲಿ ನಡೆದ ಕಳ್ಳತನದ ಬಗ್ಗೆ ಪರಿಶೀಲನೆ ಮಾಡಿದ್ದೇವೆ, ರಾಜ್ಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎನ್ನುವುದನ್ನು ಸಾಬೀತು ಮಾಡಬಲ್ಲೆವು. ನರೇಂದ್ರ ಮೋದಿ ಪ್ರಧಾನಿ 25 ಸೀಟುಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಸದ್ಯ ಒಂದು ಸೀಟಿನಲ್ಲಿ ಕಳ್ಳತನವಾಗಿದೆ ಎನ್ನುವುದನ್ನು ಸಾಬೀತು ಮಾಡಿದ್ದೇವೆ. ಎಲೆಕ್ಟ್ರಾನಿಕ್ ಮತಯಂತ್ರದ ಅಂಕಿ ಅಂಶ ಸಿಕ್ಕರೆ ಮೋದಿಯರವು ಮೋಸದಿಂದ ಪ್ರಧಾನಿಯಾದ ಬಗ್ಗೆ ಸಾಕ್ಷಿ ಸಮೇತ ತೋರಿಸುತ್ತೇವೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.












Click it and Unblock the Notifications