Nandini: ದೇಶದ ಟಾಪ್ ಬ್ರ್ಯಾಂಡ್‌ಗಳಲ್ಲಿ ಕರ್ನಾಟಕದ ನಂದಿನಿಗೆ ಪ್ರಮುಖ ಸ್ಥಾನ, ಎಷ್ಟು?
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಲಂಡನ್ ಮೂಲದ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ 100 ಬ್ರ್ಯಾಂಡ್‌ಗಳಲ್ಲಿ ನಮ್ಮ ನಾಡಿನ ಅಸ್ಮಿತೆಯಾದ ನಂದಿನಿ ಉತ್ಪನ್ನಗಳು ಕೂಡ ಮಹತ್ವದ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಮೆರುಗು ಮೂಡಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬ ಎಂದು ಸಿಎಂ ಶ್ಲಾಘಿಸಿದ್ದಾರೆ. ನಮ್ಮ ನಂದಿನಿ ಬ್ರ್ಯಾಂಡ್‌ಗೆ ಸಿಕ್ಕಿರುವ ಸ್ಥಾನ ಎಷ್ಟು ಗೊತ್ತಾ?
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಪ್ಪಟ ಕನ್ನಡ ಬ್ರ್ಯಾಂಡ್ ನಂದಿನಿಯು 1,079 ಮಿಲಿಯನ್ ಡಾಲರ್ (9,009.65 ಕೋಟಿ) ಮೌಲ್ಯದೊಂದಿಗೆ "ಬ್ರ್ಯಾಂಡ್ ಫೈನಾನ್ಸ್ 2025"ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ನಂದಿನಿ ಭಾರತದ ಟಾಪ್ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿತ್ತು. ಬ್ರ್ಯಾಂಡ್ ಫೈನಾನ್ಸ್ ಲಂಡನ್ ಮೂಲದ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾಗಿದೆ ಎಂದಿದ್ದಾರೆ.

ಇನ್ನು ಆಹಾರ ಮತ್ತು ಪಾನೀಯ ವಿಭಾಗದಲ್ಲಿ 4ನೇ ಸ್ಥಾನ ಪಡೆದಿರುವ ನಂದಿನಿಯು ಅಮುಲ್, ಬ್ರಿಟಾನಿಯಾ ಮತ್ತು ಮದರ್ ಡೈರಿಗಳಂತಹ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ. ನಂದಿನಿಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಸರ್ಕಾರದ ಸಂಕಲ್ಪ, ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿಕೆ ಸುರೇಶ್ ಸಂತಸ
ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ (ಬಮುಲ್) ಅಧ್ಯಕ್ಷ ಡಿ.ಕೆ.ಸುರೇಶ್ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಲಂಡನ್ ಮೂಲದ ಬ್ರಾಂಡ್ ಫೈನಾನ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ 100 ಬ್ರಾಂಡ್‌ಗಳಲ್ಲಿ ನಮ್ಮ ನಾಡಿನ ಅಸ್ಮಿತೆಯಾಗಿರುವ ನಂದಿನಿ ಉತ್ಪನ್ನಗಳು 38ನೇ ಸ್ಥಾನ ಪಡೆದಿರುವುದು ನನಗೆ ಹೆಮ್ಮೆ ತಂದಿದೆ. ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಂದಿನಿ ಬ್ರಾಂಡ್ 4ನೇ ಸ್ಥಾನ ಪಡೆದಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲೂ ನಂದಿನಿ ರಾರಾಜಿಸುತ್ತಿದೆ ಎಂದಿದ್ದಾರೆ.
ನಂದಿನಿ ಮಾರುಕಟ್ಟೆ ವಿಸ್ತರಣೆಗೆ ಮೆಟ್ರೋಗೆ ಮನವಿ
ಬಮೂಲ್ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಂಸ್ಥೆಯಾಗಿದೆ. ಪ್ರತಿದಿನ 18 ಲಕ್ಷ ಲೀಟರ್‌ಗೂ ಅಧಿಕ ಹಾಲು ಇಲ್ಲಿ ಸಂಗ್ರಹಣೆಯಾಗುತ್ತದೆ. ನಂದಿನಿ ಬ್ರ್ಯಾಂಡ್‌ಗೆ ಉತ್ತಮ ಮಾರುಕಟ್ಟೆಗಳನ್ನು ಸೃಷ್ಟಿಸಲು ಕೊಡುಗೆಗಳನ್ನು ನೀಡುತ್ತಿದೆ. ಹೀಗಾಗಿ, ಬಮೂಲ್ ಅಧ್ಯಕ್ಷನಾಗಿ ನಂದಿನಿಯ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆಯಾಗುವಂತೆ ನೋಡಿಕೊಳ್ಳುವುದು ನನ್ನ ಹೊಣೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲು ಸಹಕಾರ ನೀಡುವಂತೆ ಕೋರಿದ್ದೇನೆ. ನಮ್ಮ ಮೆಟ್ರೋಗೆ ಸೇರಿರುವ ಖಾಲಿ ಜಾಗಗಳಲ್ಲಿ ನಂದಿನಿ ಮಾರಾಟ ಮಳಿಗೆ ಪ್ರಾರಂಭಿಸಲು ಸ್ಥಳ ಮಂಜೂರಾತಿ ಕೋರಿ ಮನವಿ ಸಲ್ಲಿಸಿದ್ದೇನೆ ಎಂದು ಸುರೇಶ್ ತಿಳಿಸಿದ್ದಾರೆ.












Click it and Unblock the Notifications