ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ಯಾರು? ಸತ್ಯ ಬಿಚ್ಚಿಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 12: ಮೆಟ್ರೋ ಟಿಕೆಟ್ ದರ ಏರಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುವ ಬಿಜೆಪಿಯವರ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜಕೀಯ ಹೊರತಾಗಿ ಬೇರೇನೂ ಗೊತ್ತಿಲ್ಲ. ಯಾರು ಬೇಕಾದರೂ ಸಂಸತ್ತಿನಲ್ಲಿ ಮಾತನಾಡಲಿ, ಇಲ್ಲಿ ಪ್ರತಿಭಟನೆ ಮಾಡಲಿ, ಗಲಾಟೆ ಮಾಡಲಿ. ಆದರೆ ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇ 50:50 ಅನುಪಾತದಲ್ಲಿ ಮಾಡಲಾಗಿರುತ್ತದೆ. ದರ ಏರಿಕೆಗೆ ಒಂದು ಸಮಿತಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ಮಾಡಿರುತ್ತಾರೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೂ ಬರುವುದಿಲ್ಲ, ದರ ಏರಿಕೆ ತೀರ್ಮಾನ ಅವರು ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಡಬಲ್ ಡೆಕ್ಕರ್ ಸೇರಿದಂತೆ ಬೆಂಗಳೂರಿನ ಮೆಟ್ರೋವನ್ನು ಇನ್ನೂ ಹೆಚ್ಚಿನ ಭಾಗಕ್ಕೆ ವಿಸ್ತರಣೆ ಮಾಡಬೇಕಿದೆ. ಮೆಟ್ರೋ ಜೊತೆಗೆ ಮೇಲ್ಸೆತುವೆ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಶೇ 50 ರಷ್ಟು ವೆಚ್ಚವನ್ನು ಭರಿಸುವುದಾಗಿ ನಾವು ತಿಳಿಸಿದ್ದೇವೆ. ಏಕೆಂದರೆ ರಸ್ತೆ ವಿಸ್ತರಣೆ ಮಾಡಬೇಕು ಎಂದರೆ ಭೂಸ್ವಾಧಿನಕ್ಕೆ ಹೆಚ್ಚು ಖರ್ಚು ಆಗುತ್ತದೆ. ಕಟ್ಟಡಗಳನ್ನು ಒಡೆದುಹಾಕಿ ರಸ್ತೆ ವಿಸ್ತರಿಸುವುದು ಹೆಚ್ಚು ತ್ರಾಸದಾಯಕ. ಇದನ್ನು ಪ್ರಾಯೋಗಿಕವಾಗಿ ರಾಗಿಗುಡ್ಡ ಜಂಕ್ಷನ್ ಬಳಿ ಮಾಡಿದ್ದೇವೆ ಎಂದು ತಿಳಿಸಿದರು.

ಇನ್ನೂ ನೀರಿನ ದರ ಏರಿಕೆ ಮಾಡಿ 14 ವರ್ಷವಾಗಿದೆ. ಅದಕ್ಕೆ ಲೀಟರ್ ಗೆ 1 ಪೈಸೆಯಷ್ಟು ದರ ಏರಿಕೆ ಪ್ರಸ್ತಾವನೆ ನನ್ನ ಮುಂದೆ ಬಂದಿದೆ. ಪರಿಶೀಲನೆ ಮಾಡಿ ತೀರ್ಮಾನ ಮಾಡಲಾಗುವುದು ಎಂದ ಅವರು, ಇನ್ವೆಸ್ಟ್ ಕರ್ನಾಟಕ 2025 ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಸ್ಥಳೀಯವಾಗಿ ರೊಟ್ಟಿ, ಖಾರದ ಪುಡಿ ಸೇರಿದಂತೆ ಆಹಾರ ಉತ್ಪನ್ನಗಳು, ಇತರೇ ಸಣ್ಣ ಕೈಗಾರಿಕೆಳಿಗೆ ಆರ್ಥಿಕವಾಗಿ ಶಕ್ತಿ ನೀಡುವುದು ನಮ್ಮ ಜವಾಬ್ದಾರಿ. ಸರ್ಕಾರ ನೀಡಿದ ಸಹಾಯಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಅಷ್ಟೇ. ಅವರು ಬದುಕಬೇಕು ರಾಜ್ಯವೂ ಬದುಕಬೇಕು ಎಂದರು.
ದೊಡ್ಡ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಂತೆ ಸಣ್ಣ ಪ್ರಮಾಣದ ಗೃಹ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಇದರಿಂದ ಪ್ರತಿ ಊರಿನಲ್ಲೂ 50 ರಿಂದ 100 ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಉದಯಗಿರಿಯಲ್ಲಿ ಕಲ್ಲು ತೂರಾಟ ಮಾಡಿರುವವರು 15- 16 ವರ್ಷದ ಹುಡುಗರು. ಈ ವೇಳೆ ಪೊಲೀಸರು ಅತ್ಯುತ್ತಮವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ. ಇಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಯಾವುದೇ ರೀತಿಯ ತಪ್ಪು ನಡೆದಿದ್ದರೂ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಪೊಲೀಸರಿಂದ ವರದಿ ತರಿಸಿಕೊಂಡಿದ್ದೇನೆ. ಘಟನೆ ನಡೆದ ತಕ್ಷಣ ಮುಸಲ್ಮಾನ ಸಮುದಾಯದ ಹಿರಿಯ ಮುಖಂಡರುಗಳು ಬಂದು ಪರಿಸ್ಥಿತಿ ನಿಭಾಯಿಸಿದ್ದಾರೆ. ಗಲಾಟೆ ತಡೆಯಲು ಬಂದ ಮುಸ್ಲಿಂ ಮುಖಂಡರಿಗೂ ಏಟುಗಳು ಬಿದ್ದಿವೆ. ಪೊಲೀಸ್ ಅಧಿಕಾರಿ ಮುತ್ತುರಾಜ್ ಅವರ ಕಾಲಿಗೂ ಏಟಾಗಿದೆ. ಈ ವಿಡಿಯೋವನ್ನು ನಾನು ನೋಡಿದ್ದೇನೆ ಎಂದು ಹೇಳಿದರು.
ಮೈಸೂರಿನ ಉದಯಗಿರಿಯಲ್ಲಿನ ಗಲಭೆ ಹಾಗೂ ಈ ಪ್ರಕರಣದಲ್ಲಿ ಪೊಲೀಸರದ್ದೇ ತಪ್ಪಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಸಚಿವರ ಹೇಳಿಕೆ ಕುರಿತು ಮುಖ್ಯಮಂತ್ರಿಗಳು, ಗೃಹಸಚಿವರು ಉತ್ತರಿಸಲಿದ್ದಾರೆ. ಉದಯಗಿರಿ ಪ್ರಕರಣದಲ್ಲಿ ಪೊಲೀಸ್ ನವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಯಾರು ಏನು ಪದ ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸ್ ಅವರಿಗಾದರೆ ರಕ್ಷಣೆಯಿತ್ತು, ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ ಎಂದರು.












Click it and Unblock the Notifications