ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಉತ್ತರ ಕೊಡುತ್ತದೆ- ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 19: ಬಿಜೆಪಿಯವರ ಷಡ್ಯಂತ್ರ ಏನೇ ಇರಬಹುದು, ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಎಲ್ಲಾ ಉತ್ತರ ಕೊಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಸಿಬಿಐ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೇ 90 ರಷ್ಟು ತನಿಖೆ ನಡೆಸಿದ್ದೇವೆ ಎಂದು ಸಿಬಿಐ ಹೇಳಿದೆ. ನಾನು, ನನ್ನ ಹೆಂಡತಿ ಹಾಗೂ ಕುಟುಂಬದವರು ನನ್ನ ಆಸ್ತಿ ಯಾವುದು, ನನ್ನ ಹೆಂಡತಿಯ ಆಸ್ತಿ ಯಾವುದು ಎಂದು ಹೇಳಬೇಕು. ನನ್ನನ್ನೇ ಕರೆಸದೆ, ಕೇಳದೆ ಅದು ಹೇಗೆ ಶೇಕಡಾ 90 ರಷ್ಟು ತನಿಖೆ ಮಾಡಿದರೋ ಗೊತ್ತಿಲ್ಲ ಎಂದರು.

ನಾವು ನ್ಯಾಯಾಲಯಕ್ಕೆ ಸಿಬಿಐ ದಾಖಲಿಸಿರುವ ಎಫ್‌ಐಆರ್ ಸರಿ ಇಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೆವು. ರಾಜಕೀಯ ಉದ್ದೇಶದಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದ ವೇಳೆ ತನಿಖೆಗೆ ಆದೇಶ ನೀಡಿದ್ದರು. ನನಗೆ ನ್ಯಾಯಲಯದ ಬಗ್ಗೆ ಗೌರವ, ನಂಬಿಕೆಯಿದೆ. ಅಗತ್ಯ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತೇನೆ. ಏನೇ ಪ್ರೇರಣೆ ಇರಬಹುದು, ಆದರೆ ನಾನು ಕಾನೂನು ಚೌಕಟ್ಟಿನಲ್ಲೇ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಬಿಐ ತನಿಖೆ ಸಂಬಂಧ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಸಿಬಿಐ ತನಿಖೆ ರದ್ದು ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಇಂದು ನ್ಯಾಯಮೂರ್ತಿ ಕೆ.ನಟರಾಜನ್ ನೇತೃತ್ವದ ಪೀಠ ಸಿಬಿಐ ತನಿಖೆಗೆ ಅನುಮತಿ ನೀಡಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ ಏನು..?
ಡಿಸಿಎಂ ಡಿ.ಕೆ ಶಿವಕುಮಾರ್ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ, 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿಯಲ್ಲಿ 13(2), 13(1)ಇ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆ ತಡೆಯಾಜ್ಞೆ ನೀಡಿತ್ತು. ಅಲ್ಲದೇ ಮೇಲಿಂದ ಮೇಲೆ ತಡೆಯಾಜ್ಞೆಯನ್ನು ಕೋರ್ಟ್ ವಿಸ್ತರಿಸಿತ್ತು. ಇದೀಗ ಸಿಬಿಐ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದೆ.












Click it and Unblock the Notifications