ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ; ಗೃಹ ಸಚಿವ, ವಿಪಕ್ಷ ನಾಯಕರು ಏನೆಂದರು?
ಬೆಂಗಳೂರು, ಮಾರ್ಚ್ 23: ರಾಜ್ಯದ ಕರಾವಳಿಯ ದೇವಸ್ಥಾನಗಳ ಜಾತ್ರೋತ್ಸವದ ವೇಳೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಇಲ್ಲ, ತರಿಸಿಕೊಳ್ಳುತ್ತೇನೆ,'' ಎಂದು ಉತ್ತರಿಸಿದ್ದಾರೆ.
Recommended Video

ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ವಿರೋಧಿಸಿ ಒಂದು ಕೋಮಿಗೆ ಸೇರಿದವರು ಬಂದ್ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಹೀಗಾಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆಯಾಗಿದ್ದು, ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಈ ಎಲ್ಲ ಪರಿಸ್ಥಿತಿಗೆ ಕಾಂಗ್ರೆಸ್‌ನವರೇ ಕಾರಣ. ಅವರೇ ಹೊಣೆ ಹೊರಬೇಕು. ಅಧಿಕಾರಕ್ಕಾಗಿ ಒಂದು ಕೋಮಿನ ಓಲೈಕೆ ಮಾಡಿ ಈ ದೇಶದಲ್ಲಿ ಎಲ್ಲಾ ಮನಸ್ಸನ್ನು ಒಡೆದಿದ್ದು ಕಾಂಗ್ರೆಸ್ಸಿಗರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಎಲ್ಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ವಿವಾದ ಕುರಿತ ಸಂಪೂರ್ಣ ಮಾಹಿತಿಯನ್ನು ತರಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ನವರು ಸತ್ಯ ಹೇಳುವುದನ್ನು ಮರೆತರು. ಕಾಂಗ್ರೆಸ್ನವರ ಪ್ರತಿಕ್ರಿಯೆಗೆ ಯಾವ ಬೆಲೆಯೂ ಇಲ್ಲ. ಜನಸಮುದಾಯವು ಕೇಳುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅವಕಾಶ ನಿರಾಕರಣೆ ಕಾನೂನುಬಾಹಿರ: ಸಿದ್ದರಾಮಯ್ಯ
ಕರಾವಳಿ ಜಿಲ್ಲೆಗಳ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ರೀತಿ ಅವಕಾಶ ನಿರಾಕರಿಸುವುದು ತಪ್ಪು ಎಂದು ಹೇಳಿದ್ದಾರೆ.
ಅಂಗಡಿ ಟೆಂಡರ್ ನಿರಾಕರಿಸುವುದು, ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ. ಇದು ಸಂಪೂರ್ಣ ಕಾನೂನುಬಾಹಿರ. ನಮ್ಮ ದೇಶದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು; ಡಿ.ಕೆ. ಶಿವಕುಮಾರ್
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಸರಿಯಲ್ಲ. ಎಲ್ಲ ಕಡೆ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಚರ್ಚ್, ಮಸೀದಿ ಮುಂದೆ ಹಿಂದೂಗಳಿಗೆ ಅವಕಾಶ ನೀಡದೇ ಹೋದರೆ ಏನಾಗುತ್ತದೆ? ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ. ಯಾರೂ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿ; ಯು.ಟಿ. ಖಾದರ್
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲವರು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದರು.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳು ವಿರೋಧಿಸಿರುವ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಕರಾವಳಿ ಭಾಗದ ಮುಲ್ಕಿ ಸೇರಿದಂತೆ ಹಲವೆಡೆ ಕೆಲವರು ಸ್ವಹಿತಾಸಕ್ತಿಗಾಗಿ ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದೊಂದು ಅಸಹ್ಯದ ಕೃತ್ಯ. ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು. ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದೆ. ಒಳಗೊಳಗೆ ಖುಷಿ ಪಡುತ್ತಿದೆಯಾ? ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪ ಮಾಡಿದರು.












Click it and Unblock the Notifications