Munirathna Naidu: ಮುನಿರತ್ನ ಆರೋಗ್ಯದಲ್ಲಿ ದಿಢೀರ್ ಏರುಪೇರು, ಜಯದೇವ ಆಸ್ಪತ್ರೆಗೆ ದಾಖಲು!
ಜಾತಿ ನಿಂದನೆ, ಲಂಚ ಬೇಡಿಕೆ ಹಾಗೂ ಜೀವ ಬೆದರಿಕೆಯ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮುನಿರತ್ನಗೆ ಎದೆರೋಗ ಕಾಣಿಸಿಕೊಂಡಿದ್ದು, ಪೊಲೀಸರು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ವರದಿಯಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ನಾಯ್ಡು ಅವರನ್ನು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಮುನಿರತ್ನ ಪ್ರಕರಣವು ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಮುನಿರತ್ನ ನಾಯ್ದು ಜಾತಿ ನಿಂದನೆ ಮಾತನಾಡಿದ್ದಾರೆ ಎಂದು ದಲಿತಪರ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿವೆ. ಈ ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಮುನಿರತ್ನ ನಾಯ್ಡುಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅವರನ್ನು ವಿಚಾರಣೆ ನಡೆಸುವಾಗ ಎದೆನೋವು ಕಾಣಿಸಿಕೊಂಡಿರುವುದು ವರದಿಯಾಗಿದೆ.
ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ
ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜಯದೇವದಲ್ಲಿ ಆರೋಗ್ಯ ಪರೀಕ್ಷೆ ನಡೆಸಲಾಗಿದೆ. ಮುನಿರತ್ನ ಅವರಿಗೆ ಸೋಮವಾರ ರಾತ್ರಿ 7 ಗಂಟೆ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಪೊಲೀಸರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ.
ಶಾಸಕ ಮುನಿರತ್ನ ವೈದ್ಯಕೀಯ ಪರೀಕ್ಷೆ ಮುಕ್ತಾಯ
ಶಾಸಕ ಮುನಿರತ್ನ ನಾಯ್ಡು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮೊದಲು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇನ್ನು ಈಗ ಅವರ ಆರೋಗ್ಯ ಸುಧಾರಿಸಿದೆ. ಇಂದು ಸಹ ಮುನಿರತ್ನ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವವರಿದ್ದರು. ಆದರೆ, ಎದೆನೋವು ಎಂದು ಶಾಸಕ ಹೇಳಿದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ಇಂದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿದ ಕೂಡಲೇ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಮುನಿರತ್ನಗೆ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ಬೌರಿಂಗ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಲಾಗಿತ್ತು. ಅಲ್ಲಿನ ವೈದ್ಯರು ಕಾರ್ಡಿಯಾಲಜಿಸ್ಟ್ ಗೆ ತೋರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.













Click it and Unblock the Notifications