ಮಾಜಿ ಶಾಸಕ ದೊರೆಸ್ವಾಮಿ ನಿಧನ: ರಾಜಕೀಯ ಗಣ್ಯರಿಂದ ಸಂತಾಪ
ಬೆಂಗಳೂರು, ಮಾರ್ಚ್ 07: ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ಸಂಸ್ಥಾಪನಾ ಅಧ್ಯಕ್ಷ ಹಾಗೂ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ (89) ಅವರು ಗುರುವಾರ ನಿಧನರಾಗಿದ್ದಾರೆ. ದೊರೆಸ್ವಾಮಿ ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಪತ್ನಿ ಓರ್ವ ಪತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದೊರೆಸ್ವಾಮಿ ಅವರ ಅಗಲಿಕೆಗೆ ಅವರ ಕುಟುಂಬದವರು ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದು, ರಾಜಕೀಯ ಗಣ್ಯರು ಸಂತಾಪವನ್ನ ಸೂಚಿಸಿದ್ದಾರೆ.
ವಿಧಾನಪರಿಷತ್ತಿನ ಬಿಜೆಪಿ ಮಾಜಿ ಸದಸ್ಯ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಲಯದ ಕುಲಾಧಿಪತಿ ದೊರೆಸ್ವಾಮಿ ನಾಯ್ಡು ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಪ್ರಮುಖವಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅವರು ವಿಶೇಷ ಕೊಡುಗೆ ನೀಡಿದ್ದರು ಎಂದು ತಿಳಿಸಿದ್ದಾರೆ. ದೊರೆಸ್ವಾಮಿ ನಾಯ್ಡು ಅವರ ಅಭಿಮಾನಿಗಳು, ಕುಟುಂಬ ವರ್ಗದವರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು, ದೊರೆಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಖ್ಯಾತ ಶಿಕ್ಷಣ ತಜ್ಞರು, PES ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಕುಲಾಧಿಪತಿಗಳು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೂ ಆಗಿದ್ದ ಎಂ.ಆರ್.ದೊರೆಸ್ವಾಮಿರವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಅನನ್ಯ ಕೊಡುಗೆ ನೀಡಿದ್ದರಲ್ಲದೆ, ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲು ಸರಕಾರಕ್ಕೆ ಸಲಹೆಗಾರಗಿಯೂ ಕರ್ತವ್ಯ ನಿರ್ವಹಿಸಿದ್ದರು . ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ, ಶಿಷ್ಯವೃಂದಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ದೊರೆಸ್ವಾಮಿ ಅವರ ನಿಧನಕ್ಕೆ ಡಿ.ಕೆ.ಶಿವಕುಮಾರ್ ಸಂತಾಪ
ಪಿಇಎಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು, ಶಿಕ್ಷಣ ತಜ್ಞ ಎಂ.ಆರ್. ದೊರೆಸ್ವಾಮಿ ಅವರ ನಿಧನಕ್ಕೆ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಬನಶಂಕರಿ ನಗರ 2ನೇ ಹಂತದಲ್ಲಿರುವ ಮೃತರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಡಿಸಿಎಂ ಅವರು ಮೃತರ ಅಂತಿಮ ದರ್ಶನ ಪಡೆದರು. ದೊರೆಸ್ವಾಮಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮ ಗಾಂಧಿ ಅವರ ಜೀವನ ತತ್ವ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎನ್ನುವ ಬೃಹದಾಕಾರದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಬೆಳೆಸಿದವರು, ದೇಶ-ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎಂ.ಆರ್. ದೊರೆಸ್ವಾಮಿ ಅವರು ಛಲಗಾರರಾಗಿದ್ದರು. ಬೃಹತ್ ಶೈಕ್ಷಣಿಕ ಸಾಮ್ರಾಜ್ಯ ಕಟ್ಟಿರುವ ಎಂ.ಆರ್. ದೊರೆಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲೆ. ಅವರಿಂದ ನೂರಾರು ಅಂಶಗಳನ್ನು ಕಲಿತಿದ್ದೇನೆ. ಅವರ ಸಾಹಸದ ಮನೋಭಾವ ಇಂದಿನ ಯುವ ಜನರಿಗೆ ಸ್ಪೂರ್ತಿದಾಯಕ.
ಮಾಜಿ ಸಚಿವ ದಯಾನಂದ ಸಾಗರ್ ಅವರ ಗರಡಿಯಲ್ಲಿ ಬೆಳೆದು ಚಿಕ್ಕ ವಯಸ್ಸಿಗೆ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟವರು. ಹನುಮಂತನಗರದ ಕೆಂಪಣ್ಣ ಗರಡಿ ಮನೆ ಆವರಣದಲ್ಲಿ 1973 ರಲ್ಲಿ ಪಿಇಎಸ್ ಪಿಯು ಕಾಲೇಜು ಆರಂಭಿಸಿ, ಮುಂದೆ ಅದನ್ನು ಬೃಹದಾಕಾರವಾಗಿ ಬೆಳೆಸಿದ ಶಿಕ್ಷಣ ಸಾಹಸಿ. ಎಂಜಿನಿಯರಿಂಗ್ ಶಿಕ್ಷಣಕ್ಕೆ ಬ್ರಾಂಡ್ ಮೌಲ್ಯ ತಂದು ಕೊಟ್ಟವರು. ಇವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications