ಗುಲ್ಬರ್ಗಾ: ಸೊಸೆಗೆ ಆಹಾರದಲ್ಲಿ ವಿಷ ಹಾಕಿದ ಅತ್ತೆ
ಗುಲ್ಬರ್ಗಾ, ಜೂ.25: ಆಸ್ತಿ ಮೇಲಿನ ಆಸೆಗಾಗಿ ಅತ್ತೆಯೊಬ್ಬಳು ತನ್ನ ಸೊಸೆ ಮತ್ತು ನಾಲ್ವರು ಮೊಮ್ಮಕ್ಕಳಿಗೆ ವಿಷ ನೀಡಿ ಹತ್ಯೆಗೆ ಯತ್ನಿಸಿದ ಘಟನೆ ಗುಲ್ಬರ್ಗಾದ ಜೇವರ್ಗಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆದಿದೆ.
ಬಳಬಟ್ಟಿ ಗ್ರಾಮದ 35 ವರ್ಷದ ಸುವರ್ಣ ಮತ್ತು ಮಕ್ಕಳಾದ 10 ವರ್ಷದ ಪರಸಪ್ಪ, 12 ವರ್ಷದ ಅಶ್ವಿನಿ, 16 ವರ್ಷದ ಶರಣಬಸವ ಮತ್ತು 14 ವರ್ಷದ ರೋಹಿಣಿ ವಿಷ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಸುವರ್ಣಾಳ ಪತಿ ಮೂರು ವರ್ಷದ ಮೃತಪಟ್ಟಿದ್ದು ನಾಲ್ವರು ಪುಟ್ಟ ಪುಟ್ಟ ಮಕ್ಕಳ ಜೊತೆ ಈಕೆ ಜೀವನ ನಡೆಸುತ್ತಿದ್ದಾಳೆ. ಪತಿಯ ಹೆಸರಿನಲ್ಲಿ ಪಿತ್ರಾರ್ಜಿತ ಆಸ್ತಿ ಇದ್ದು ಸೊಸೆ ಎಷ್ಟು ಬೇಡಿಕೊಂಡರೂ ಅತ್ತೆ ಮಹಾದೇವಿ ಮಗನ ಪಾಲನ್ನು ಸೊಸೆಗೆ ನೀಡುತ್ತಿರಲಿಲ್ಲ.

ಇದರಿಂದ ಸಿಟ್ಟಾದ ಅತ್ತೆ ಮಹಾದೇವಿ, ಮೈದುನ ಗುರಣ್ಣ ಮತ್ತು ನಾದನಿಯರು ಸೇರಿ ಸುವರ್ಣ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ಸುವರ್ಣ ಮತ್ತು ಮಕ್ಕಳ ಸಾಯಿಸಲು ಆಹಾರದಲ್ಲಿ ವಿಷ ಹಾಕಿದ್ದರು ಎಂದು ಹೇಳಲಾಗುತ್ತಿದೆ.
ವಿಷಾಹಾರ ಸೇವಿಸಿರುವ ಸುವರ್ಣ ಹಾಗೂ ಮಕ್ಕಳನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications