Encounter: ಉಡುಪಿಯಲ್ಲಿ ಮೋಸ್ಟ್‌ವಾಂಟೆಡ್, ಖತರ್ನಾಕ್ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್!
Vikram Gowda: ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಹಾವಳಿ ತುಸು ಕಡಿಮೆಯಾಗಿತ್ತು. ಆದರೆ, ಇದೀಗ ನಕ್ಸಲರ ಹಾವಳಿ ಮತ್ತೆ ಹೆಚ್ಚಾಗಿದೆಯೇ ಎನ್ನುವ ಅನುಮಾನ ಎದುರಾಗಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮೋಸ್ಟ್‌ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ. ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈತನಿಗಾಗಿ ನಕ್ಸಲ್ ನಿಗ್ರಹ ಪಡೆ ಹದ್ದಿನ ಕಣ್ಣಿಟ್ಟಿತ್ತು. ಇದೀಗ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿರುವ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾನೆ.
ಕರ್ನಾಟಕದ ಕರಾವಳಿ ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಹಿಂದೆ ನಕ್ಸಲ್ ಹಾವಳಿ ವಿಪರೀತವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಹಾವಳಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ನಕ್ಸಲರ ಹಾವಳಿ ಕಡಿಮೆಯಾಗಿದ್ದರೂ, ವಿವಿಧ ತಂಡಗಳನ್ನು ಮುನ್ನಡೆಸುತ್ತಿದ್ದ ನಕ್ಸಲ್ ನಾಯಕರಿಗಾಗಿ ನಕ್ಸಲ್ ನಿಗ್ರಹ ಪಡೆ ನಿರಂತರವಾಗಿ ಬಲೆ ಬೀಸುತ್ತಲ್ಲೇ ಇತ್ತು. ಇದೀಗ ಖತರ್ನಾಕ್ ಹಾಗೂ ಮೋಸ್ಟ್‌ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

ಮೋಸ್ಟ್ ವಾಂಟೆಡ್: ನಕ್ಸಲ್ ನಾಯಕ ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಇದ್ದ. ಕೇವಲ ಕರ್ನಾಟಕ ಮಾತ್ರವಲ್ಲ ಆತನಿಗಾಗಿ ನೆರೆಯ ಕೇರಳ ಹಾಗೂ ತಮಿಳುನಾಡು ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಕ್ಸಲ್ ಚುಟುವಟಿಕೆಗಳಲ್ಲಿ ಭಾಗವಹಿಸಿದ್ದ ಆರೋಪ ಹಾಗೂ ಅದರ ಮುಂದಾಳತ್ವ ವಹಿಸಿದ್ದ ಆರೋಪವೂ ಈತನ ಮೇಲಿದೆ.
ಗುಂಡಿನ ಚಕಮಕಿ: ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೆಬ್ರಿ ಕಬ್ವಿನಾಲೆಯಲ್ಲಿ ಸೋಮವಾರ ತಡರಾತ್ರಿ ಈ ಕಾರ್ಯಾಚರಣೆ ನಡೆದಿದೆ. ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲ್‌ರ ನಡುವೆ ಗುಂಡಿನ ಚಕಮಕಿ ನಡೆದಿದ್ದು. ಈ ಗುಂಡಿನ ದಾಳಿಯಲ್ಲಿ ನಕ್ಸಲ್ ನಾಯಕ ವಿಕ್ರಂಗೌಡ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಇಲ್ಲಿನ ಹೆಬ್ರಿಯಲ್ಲಿ ಕಳೆದ ಕೆಲವು ದಿನಗಳಿಂದ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕಾಗಿ ಇಲ್ಲಿ ನಕ್ಸಲ್ ನಿಗ್ರಹದಳ ಕಾರ್ಯಾಚರಣೆ ಚುರುಕುಗೊಳಿಸಿತ್ತು. ಅಲ್ಲದೇ ಕೊಂಬಿಂಗ್ ಕಾರ್ಯಾಚರಣೆ ಸಹ ನಡೆಸಲಾಗಿತ್ತು.ಇನ್ನು ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ.
ಕುದುರೆಮುಖ ರಾಷ್ಟ್ರೀಯ ಉದ್ಯಾನವ ವಿರೋಧಿಸಿ ನಡೆಸಲಾಗಿದ್ದ ಹೋರಾಟದಲ್ಲಿ ಸಹ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ. ಅಲ್ಲಿಂದ ಆತ ನಕ್ಸಲ್ ಗುಂಪಿನೊಂದಿಗೆ ಬೆರೆತ. ಮುಂದೆ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನಡೆಸುತ್ತಿದ್ದ ಎನ್ನಲಾಗಿದೆ.
15 ವರ್ಷಗಳಿಂದ ಹುಡುಕಾಟ: ಈ ನಕ್ಸಲ್ ನಾಯಕನನ್ನು ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯು ಕಳೆದ 15 ವರ್ಷಗಳಿಂದಲೂ ಹುಡುಕುತ್ತಿತ್ತು. ಈಚೆಗೆ ನೆರೆಯ ಕೇರಳದಲ್ಲಿ ನಕ್ಸಲ್ ಹಾವಳಿ ತೀವ್ರವಾಗಿತ್ತು. ಅಲ್ಲಿ ಭಾರೀ ಕಾರ್ಯಾಚರಣೆ ಶುರುವಾಗುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದ ತಂಡವು ಕರ್ನಾಟಕದಲ್ಲಿ ಆಶ್ರಯ ಪಡೆದುಕೊಂಡಿದೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನಕ್ಸಲರ ಚಟುವಟಿಕೆ ತೀವ್ರವಾಗಿತ್ತು. ಹೀಗಾಗಿ ಈ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ಹದ್ದಿನ ಕಣ್ಣಿಡಲಾಗಿತ್ತು.
ರೇಷನ್‌ಗೆ ಬರುವಾಗ ಎನ್‌ಕೌಂಟರ್: ನಕ್ಸಲರ ತಂಡ ಕರ್ನಾಟಕದಲ್ಲಿ ಬೀಡು ಬಿಟ್ಟಿರುವ ಬಗ್ಗೆ ಈಚೆಗೆ ವರದಿಯಾಗಿತ್ತು. ಚಿಕ್ಕಮಗಳೂರು ಹಾಗೂ ಉಡುಪಿಯ ಅಂಗಡಿಗಳಿಗೆ ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಭೇಟಿ ನೀಡಿದಾಗಲೇ ಇಲ್ಲಿನ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ತಂಡ ಅಲರ್ಟ್ ಆಗಿತ್ತು.
ಇನ್ನು ಇದೀಗ ಎನ್‌ಕೌಂಟರ್ ನಡೆದ ದಟ್ಟ ಅರಣ್ಯ ಪ್ರದೇಶಕ್ಕೆ ನಕ್ಸಲರ ತಂಡ ರೇಷನ್‌ಗಾಗಿ ಬರುತ್ತಿದ್ದದ್ದು ಖಚಿತವಾಗಿತ್ತು. ಇಲ್ಲಿನ ಪೀತಬೈಲಿನಲ್ಲಿರುವ ಮಲೆಕುಡಿಯರು ಸೇರಿದಂತೆ ಬೆರಳೆಣಿಕೆಯ ಮನೆಗಳಿವೆ.
ಇಲ್ಲಿಂದಲೇ ನಕ್ಸಲರು ರೇಷನ್ (ಅಕ್ಕಿ, ಬೇಳೆ ಹಾಗೂ ಆಹಾರ ಪದಾರ್ಥಗಳು) ತೆಗೆದುಕೊಂಡು ಹೋಗುತ್ತಿದ್ದರು ಎನ್ನುವ ಖಚಿತ ಮಾಹಿತಿಯ ಮೇಲೆ ನಕ್ಸಲ್ ನಿಗ್ರಹ ದಳ ಮೊದಲೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿತ್ತು. ರೇಷನ್ ಸಂಗ್ರಹ ಮಾಡಿಕೊಳ್ಳಲು ಬಂದಾಗ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗವೇ ನಡೆದಿದೆ. ಅದರಲ್ಲಿ ಮೋಸ್ಟ್‌ವಾಂಟೆಡ್ ವಿಕ್ರಂಗೌಡ ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ, ಇನ್ನುಳಿದ ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications