ರಾಜ್ಯದಲ್ಲಿ ಜೂನ್ 13 ಹಾಗೂ 14ರಂದು ಮಳೆಯ ಆರ್ಭಟ ಜೋರು
ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿ ವಾರ ಕಳೆದಿದೆ ಆದರೆ ಬಹುತೇಕ ಕಡೆಗಳಲ್ಲಿ ಇನ್ನೂ ಮಳೆ ಶುರುವಾಗಿಲ್ಲ.
ಹಲವು ಜಿಲ್ಲೆಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಮಳೆ ಬರುತ್ತಿದೆ, ಜೂನ್ 13 ರಿಂದ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 13 ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಗಾರು: ಜೂನ್ 14ರಂದು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಜೂನ್ 14 ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮೂರು ದಿನಗಳ ಬಳಿಕ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ದೀರ್ಘಾವಧಿ ಮುಂಗಾರು ಪ್ರಮಾಣ
ಭಾರತೀಯ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ವರದಿಯನುಸಾರ ಎರಡನೆಯ ದೀರ್ಘಾವಧಿ ಅಂದಾಜಿನಲ್ಲಿ ಈ ಬಾರಿ ಮುಂಗಾರು ಪ್ರಮಾಣ ಶೇ. 101ರಷ್ಟಿರಲಿದೆ.
ಇದು 2 ವರ್ಷಗಳ ದೀರ್ಘಾವಧಿ ಸರಾಸರಿ (LPA) ಮಳೆ ಪ್ರಮಾಣದ ಆಧಾರದಲ್ಲಿದೆ. LPA ಅಂದ್ರೆ ದೀರ್ಘಾವಧಿ ಮಳೆ ಸರಾಸರಿ 88 ಸೆಂಟಿ ಮೀಟರ್ ಪ್ರಮಾಣದಲ್ಲಿರುತ್ತದೆ. ಇದನ್ನು 1961ರ ಮತ್ತು 2010ರ ನಡುವೆ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಾದ ಮಳೆಯನ್ನಾಧರಿಸಿ ಲೆಕ್ಕ ಹಾಕಲಾಗಿದೆ.

ಬೆಂಗಳೂರು ಹವಾಮಾನ ವರದಿ
ಬೆಂಗಳೂರಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಎಚ್‌ಎಎಲ್‌ನಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಭೂಕುಸಿತ ಸಾಧ್ಯತೆ
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 3 ದಿನ ಗುಡುಗು ಸಿಡಿಲು ಸಹಿತ ಮಳೆ ಬೀಳಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯಿಂದ ಭೂಕುಸಿತವಾಗುವ ಸಾಧ್ಯತೆಯಿದೆ ಎಂದೂ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

2019-20ರಲ್ಲಿ ಮಳೆಯ ಪ್ರಮಾಣವೆಷ್ಟು?
2020 ಮತ್ತು 2019 ಮುಂಗಾರು ಸಾಲಿನಲ್ಲಿ LPA ಮಳೆ ಸರಾಸರಿ ಅನುಕ್ರಮವಾಗಿ 110 % ಮತ್ತು 109 % ಪ್ರಮಾಣದಲ್ಲಿತ್ತು. 1996, 1997 ಮತ್ತು 1998 ಮುಂಗಾರು ಸಾಲಿನಲ್ಲಿ 103.4 %, 102.2 % ಮತ್ತು 104 % ಪ್ರಮಾಣದ ಮಳೆಯಾಗಿತ್ತು.