ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಫೋನ್: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್ ಫೋನ್ ಸಿಕ್ಕಿರುವ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ದಾಳಿ ವೇಳೆ ಕೈದಿಗಳಿಂದ ಮೊಬೈಲ್ ಫೋನ್ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ರೀತಿಯ ದಾಳಿಗಳನ್ನು ರಾಜ್ಯಾದ್ಯಂತ ಕಾರಾಗೃಹಗಳಲ್ಲಿ ನಡೆಸಲಾಗುತ್ತದೆ. ಈ ಹಿಂದೆಯೂ ಇಂತಹ ದಾಳಿಗಳನ್ನು ನಡೆಸಲಾಗಿತ್ತು.
ರಾಜ್ಯದ ಕಾರಾಗೃಹಗಳಲ್ಲಿ ಭದ್ರತೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಎಲ್ಲಾ ವಿಚಾರಣಾ ಹಾಗೂ ಸಜಾ ಬಂದಿಗಳನ್ನು Alphabetic ಮಾದರಿಯಲ್ಲಿ ವಿಂಗಡಣೆ ಮಾಡಲಾಗಿದೆ ಹೊರತು, VIP ಬಂದಿಗಳು ಹಾಗೂ ಸಾಮಾನ್ಯ ಬಂದಿಗಳೆಂದು ಪ್ರತ್ಯೇಕಿಸಿರುವುದಿಲ್ಲ ಎಂದಿದ್ದಾರೆ.

ಕಾರಾಗೃಹದ ಯಾವುದೇ ಬಂದಿಗಳಿಗೆ ವಿವಿಐಪಿ ಟ್ರೇಟ್‌ಮೆಂಟ್ ನೀಡಿರುವುದಿಲ್ಲ. ಈ ಕುರಿತಾದ ವರದಿಗಳು ಸತ್ಯಕ್ಕೆ ದೂರವಾಗಿವೆ. ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಕೈಪಿಡಿ, ಕಾರಾಗೃಹಗಳ ನಿಯಮಗಳು ಮತ್ತು ಕಾರಾಗೃಹ ಕಾಯ್ದೆಯಂತೆ ಬಂದಿಗಳಿಗೆ ನಿಯಮಾನುಸಾರ ಕ್ರಮವಹಿಸಲಾಗುತ್ತಿದೆ.
ಕೆಲವು ಕೈದಿಗಳ ಕೊಠಡಿಯಲ್ಲಿ ತಪಾಸಣೆಯಲ್ಲಿ ವಶಪಡಿಸಿಕೊಳ್ಳಲಾದ ಮೊಬೈಲ್ ಹಾಗೂ ಇನ್ನಿತರೆ ವಸ್ತುಗಳು ಪೊಲೀಸ್ ವಶದಲ್ಲಿದ್ದು, ಮೊಬೈಲ್‌ನಲ್ಲಿ ಏನಿತ್ತು ಎಂಬುದರ ಬಗ್ಗೆ ಪರಿಶೀಲನೆ ಮಾಡಿರುವುದಿಲ್ಲ. ಈ ಬಗ್ಗೆ ಫೊರೆನ್ಸಿಕ್ ಎವಿಡೆನ್ಸ್ ಇಲ್ಲದೆ ಹಾಗೂ ಹೆಚ್ಚಿನ ತನಿಖೆ ನಡೆಯದೆ ಮಾಹಿತಿ ನೀಡಲು ಸಾಧ್ಯವಿಲ್ಲ.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಕರ್ತವ್ಯದಿಂದ ನಿಲಂಬನಗೊಳಿಸಲಾಗಿದೆ ಹಾಗೂ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ, ಸಮಗ್ರ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಪಿಎಂ ಕೇರ್ಸ್ ಫಂಡ್ ವಿಷಯ ಚರ್ಚೆ
ಇನ್ನು ವಿರೋಧಪಕ್ಷದವರು ನಿಜಕ್ಕೂ ಪ್ರತಿಭಟನೆ ನಡೆಸುತ್ತಿದ್ದರೆ, ನಿಯಮಾವಳಿ ಅನುಸಾರ ಸದನದ ಬಾವಿಗೆ ಇಳಿಯಬೇಕು. ಕಳೆದ ಮೂರು ದಿನಗಳಿಂದ ಕಲಾಪ ಆರಂಭವಾದ ಬಳಿಕ ತಮ್ಮ ಆಸನದಲ್ಲಿಯೇ ಕಿರುಚಾಡುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರಿಗೆ ರಾಜ್ಯ ಎದುರಿಸುತ್ತಿರುವ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಲು ನಿಜಕ್ಕೂ ಆಸಕ್ತಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಮುಂದುವರಿದು ವಿರೋಧ ಪಕ್ಷದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಅವರು ಪ್ರಶ್ನೆ ಕೇಳಲೇ ಸಿದ್ಧರಿಲ್ಲ. ತಮ್ಮ ಅನುಚಿತ ವರ್ತನೆ ಮೂಲಕ ಸಭಾಧ್ಯಕ್ಷರ ಪೀಠ ಹಾಗೂ ಸದನವನ್ನು ಅಗೌರವಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣವು ಕಾಂಗ್ರೆಸ್ ನಾಯಕರ ಮನೆಗೆ ಹೋಗಿದೆ ಎಂದು ಆರೋಪಿಸುವ ಬಿಜೆಪಿಗರು, ಪಿಎಂ ಕೇರ್ಸ್ ಫಂಡ್ ಹೆಸರಲ್ಲಿ ಸಂಗ್ರಹಿಸಿದ ದೇಣಿಗೆ ಎಲ್ಲಿ ಹೋಯ್ತು ಎಂದು ತಿಳಿಸುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶಾದ್ಯಂತ ದೇಣಿಗೆ ಸಂಗ್ರಹಿಸಿದ್ದರಲ್ಲ, ಅದರ ಹುಂಡಿ ಹಣ ಈಗ ಯಾರ ಮನೆಗೆ ಹೋಗಿದೆ? ಕೆಪಿಎಸ್‌ಸಿ ಹಗರಣದಲ್ಲಿ ಲೂಟಿ ಹೊಡೆದ ಹಣವನ್ನು ಯಾರಿಗೆ ಕಳುಹಿಸಿದ್ದಾರೆ. ಕರ್ನಾಟಕದ ಜನತೆ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯನ್ನು ನಿರೀಕ್ಷಿಸುತ್ತಾರೆ. ಸದನವು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತದೆ ಎನ್ನುವುದು ಅವರ ಆಶಯ. ಆದರೆ ಬಿಜೆಪಿಗರಿಗೆ ಜನರ ಕುರಿತು ಕಿಂಚಿತ್ ಕಾಳಜಿ ಇಲ್ಲ. ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸಿ, ಗದ್ದಲ ಎಬ್ಬಿಸುವ ಮೂಲಕ ಸದನದ ಕಲಾಪಗಳನ್ನು ಹಾಳುಗೆಡುವುತ್ತಿದ್ದಾರೆ. ರಾಮಮಂದಿರ ಹುಂಡಿ ಕಳವು, ಪಿಎಂ ಕೇರ್ಸ್ ದೇಣಿಗೆ ಅಕ್ರಮದಂತಹ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಷ್ಟೇ ಇವರ ಉದ್ದೇಶ ಎಂದೂ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ.


Click it and Unblock the Notifications
