ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರಾಜೀನಾಮೆ: ವಿಶೇಷ ಅಧಿಕವೇಶನಕ್ಕೆ ಆಗ್ರಹ..
ಬೆಂಗಳೂರು, ಜೂನ್ 18: ಆರ್.ಸಿ.ಬಿ. ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತ, 11 ಜನರ ಸಾವಿನ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ರಾಜೀನಾಮೆ ಕೊಡಬೇಕು ಮತ್ತು ಈ ಕುರಿತು ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಈ ಕುಕಾಲ್ತುಳಿತದ ಮೂಲಕ 11 ಜನ ಅಮಾಯಕ ಯುವಜನರ ಸಾವಿನ ಚರ್ಚೆಯನ್ನು ಜಾತಿ ಗಣತಿ ಮಾಡಿಸುವುದಾಗಿ ಪ್ರಕಟಿಸಿ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ಷೇಪಿಸಿದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ಮುಂದುವರೆಸಿದ್ದೇವೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೈಪೋಟಿಯ ರೂಪದಲ್ಲಿ ಸಂಭ್ರಮದಲ್ಲಿ ನಾ ಮುಂದು ನಾ ಮುಂದು ಎಂಬಂತೆ ಪಾಲ್ಗೊಂಡಿದ್ದರು. ವಿಧಾನಸೌಧದಲ್ಲಿ ಒಬ್ಬರು, ವಿಮಾನನಿಲ್ದಾಣದಲ್ಲಿ ಒಬ್ಬರು, ಸ್ಟೇಡಿಯಂನಲ್ಲಿ ಒಬ್ಬರು ಎಂಬಂತೆ ಪೈಪೋಟಿ ನಡೆದಿತ್ತು ಎಂದು ತಿಳಿಸಿದರು. ಈಗ ನನಗೇನೂ ಸಂಬಂಧ ಇಲ್ಲ ಎಂಬ ವಾತಾವರಣ ಸೃಷ್ಟಿಸಿ ಇನ್ನೊಬ್ಬರ ಹೆಗಲ ಮೇಲೆ ಹಾಕುವ ವಾತಾವರಣ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು.
ಸಿಎಂ, ಡಿಸಿಎಂ ಹುಚ್ಚಾಟದಿಂದ 11 ಸಾವು: ವಿಜಯೇಂದ್ರ
ಮುಖ್ಯಮಂತ್ರಿಗಳ ಜನಪ್ರಿಯತೆ ಹೆಚ್ಚಿಸಲು ಮತ್ತು ಇಮೇಜ್ ವೃದ್ಧಿಗೆ ಆರ್.ಸಿ.ಬಿ. ವಿಜಯೋತ್ಸವದ ಕಾರ್ಯಕ್ರಮ ಏರ್ಪಡಿಸಿದ್ದಾರೆ ಹಾಗೂ 11 ಜನರ ಸಾವಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿಯವರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾರ್ಯಕ್ರಮ ನಡೆಸಿದ್ದಾರೆ. ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳ ನಡುವಿನ ಪೈಪೋಟಿ, ಹುಚ್ಚಾಟದಿಂದ 11 ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂಥ ಭಂಡ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜನಪ್ರಿಯತೆ ಕಳಕೊಂಡಿದ್ದಾರೆ. ರಾಜ್ಯ ಸರಕಾರದ ಪ್ರಾಯೋಜಕತ್ವದಲ್ಲಿ ಈ 11 ಜನರು ಸಾಯುವಂತಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದೇವೆ ಎಂದು ಪ್ರಕಟಿಸಿದರು.












Click it and Unblock the Notifications