B.Sriramulu: ಬಿಜೆಪಿ ನಾಯಕ ಶ್ರೀರಾಮುಲುಗೆ ಬಂತು ದೊಡ್ಡ ಆಫರ್, ಯಾರಿಂದ?
ಬಿಜೆಪಿಯಲ್ಲಿ ಅಸಮಾಧಾನಗೊಂಡು ಪಕ್ಷ ತೊರೆಯುವ ಹೇಳಿಕೆ ನೀಡಿರುವ ಪ್ರಭಾವಿ ನಾಯಕ ಹಾಗೂ ಸಂಸದ ಬಿ.ಶ್ರೀರಾಮುಲು ಅವರಿಗೆ ದೊಡ್ಡ ಆಫರ್‌ವೊಂದು ಬಂದಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಸಭೆಯಲ್ಲೇ ಶ್ರೀರಾಮುಲು ಅವರು ನಾನು ಪಕ್ಷ ತೊರೆಯುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಇದರು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ಕೂಡ ಶ್ರೀರಾಮುಲು ಅವರಿಗೆ ಗಾಳ ಹಾಕಿದೆ ಎನ್ನುವ ಮಾತಿದೆ. ಮತ್ತೊಂದೆಡೆ ಬಿಜೆಪಿಯಲ್ಲೇ ಶ್ರೀರಾಮುಲು ಅವರಿಗೆ ದೊಡ್ಡ ಆಫರ್‌ವೊಂದು ಕೊಡಲಾಗಿದೆ ಎಂಬ ಗುಸುಗುಸು ಇದೆ.
ನಿಷ್ಠಾವಂತರಿಗೆ, ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ ಎಂದು ಶ್ರೀರಾಮುಲು ಅವರು ಸಭೆಯಲ್ಲೇ ಸಿಡಿದಿದ್ದರು. ಇನ್ನು ಬಣ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬಸನಗೌಡ ಪಾಟೀಲ ಯತ್ನಾಳ್ ಕೂಡ ತಮ್ಮದು ನಿಷ್ಠಾವಂತ ಬಣ ಎಂದೇ ಕರೆದುಕೊಂಡಿದ್ದಾರೆ. ಸದ್ಯ ಯತ್ನಾಳ್ ಹಾಗೂ ಶ್ರೀರಾಮುಲು ಅವರ ಅಸಮಾಧಾನಗಳು ಒಂದೇ ಆಗಿರುವುದರಿಂದ ರಾಮುಲು ಅವರನ್ನು ತಮ್ಮ ಬಣಕ್ಕೆ ಸೆಳೆಯಲು ಯತ್ನಾಳ್ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಯತ್ನಾಳ್ ಅವರು ಶ್ರೀರಾಮುಲು ಅವರನ್ನು ಇದೇ ವಿಚಾರವಾಗಿ ಸಂಪರ್ಕಿಸಿದ್ದಾರೆ ಎಂದೂ ಮೂಲಗಳಿಂದ ತಿಳಿದುಬಂದಿದೆ. ಇನ್ನು ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ಕಾವು ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಯತ್ನಾಳ್ ಅವರು ತಮ್ಮ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಲು ಮುಂದಾಗಿದೆ. ಮತ್ತೊಂದೆಡೆ ನಾನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ, ಗೆಲುವು ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ ಯತ್ನಾಳ್.
ಆದರೆ, ಇದೀಗ ಬಿ.ಶ್ರೀರಾಮುಲು ಅವರನ್ನು ಬಂಡಾಯ ಬಣಕ್ಕೆ ಸೇರಿಸಿಕೊಳ್ಳಲು ಯತ್ನಾಳ್ ಅವರು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಸಂದರ್ಭ ಒದಗಿ ಬಂದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ತಮ್ಮ ಬಣದಿಂದಲೇ ನೀಡಲಾಗುವುದು ಎಂದು ಬಿ.ಶ್ರೀರಾಮುಲು ಅವರಿಗೆ ಆಫರ್ ಕೊಡಲಾಗಿದೆ ಎಂದೂ ಹೇಳಲಾಗುತ್ತಿದೆ. ರಾಮುಲು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಅವಕಾಶ ನೀಡ್ತೇವೆ ಎಂದು ಯತ್ನಾಳ್ ಅವರು ತಿಳಿಸಿದ್ದಾರಂತೆ. ಆದರೆ, ರಾಮುಲು ಅವರು ಈ ಆಫರ್ ತಿರಸ್ಕರಿಸಿದ್ದಾರೆ ಎಂದೂ ತಿಳಿದುಬಂದಿದೆ.
ನನಗೆ ರಾಜ್ಯಾಧ್ಯಕ್ಷ ಸ್ಥಾನವೇನೂ ಬೇಡ. ನಿಮ್ಮೊಂದಿಗೆ ನಾನು ಮೊದಲಿನಿಂದಲೂ ಉತ್ತಮ ಒಡನಾಟ ಹೊಂದಿದ್ದೇನೆ. ನಮ್ಮ ನಡುವೆ ರಾಜಕೀಯದ ಹೊರತಾಗಿಯೂ ಉತ್ತಮ ಗೆಳೆತನವೂ ಇದೆ. ಹೀಗಾಗಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಶ್ರೀರಾಮುಲು ಅವರು ಯತ್ನಾಳ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿ ಪಕ್ಷ ಬಿಡುತ್ತೇನೆ ಎಂದು ಹೇಳಿದ ಕೂಡಲೇ ಕಾಂಗ್ರೆಸ್ ಕೂಡ ಅಲರ್ಟ್ ಆಗಿತ್ತು. ಅಲ್ಲದೆ ರಾಮುಲು ಅವರನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ಗೆ ಕರೆತರಬೇಕು ಎನ್ನುವ ಲೆಕ್ಕಾಚಾರದಲ್ಲೇ ಇದೆ ಎಂದು ಚರ್ಚೆಗಳು ನಡೆಯುತ್ತಿವೆ. ಇದೀಗ ಸ್ವಪಕ್ಷದಿಂದಲೇ ರಾಮುಲು ಅವರಿಗೆ ದೊಡ್ಡ ಆಫರ್ ಬಂದಿದ್ದು, ಯತ್ನಾಳ್ ಅವರ ಬಣ ಸೇರಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications