ಮೂರೂ ಕ್ಷೇತ್ರಗಳ ಸೋಲಿಗೆ ಅಪ್ಪ-ಮಗನೇ ಕಾರಣ; ಯತ್ನಾಳ್ ಬೊಟ್ಟು ಮಾಡಿದ್ದು ಯಾರತ್ತ?
ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮೂರು ಕ್ಷೇತ್ರಗಳ ಹೀನಾಯ ಸೋಲಿಗೆ ಅಪ್ಪ-ಮಗನೇ ಕಾರಣ ಎಂದು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಕಡೆಗೆ ಬೊಟ್ಟು ಮಾಡಿದ್ದಾರೆ.
ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಸೋಲಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಯತ್ನಾಳ್ ಹೊಣೆ ಮಾಡಿದ್ದಾರೆ. ವಿಜಯೇಂದ್ರ ಅವರ ನೇತೃತ್ವವನ್ನು ರಾಜ್ಯದ ಜನ ಇನ್ನೂ ಒಪ್ಪಿಲ್ಲ. ಈ ವಿಚಾರ ವಿಜಯೇಂದ್ರಗೂ ಗೊತ್ತಿದೆ. ಬಿಜೆಪಿಯ ಹೀನಾಯ ಸೋಲಿಗೆ ಅವರೇ ನೇರ ಕಾರಣ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ ಇದೆಲ್ಲವೂ ಒಳಒಪ್ಪಂದದಿಂದ ನಡೆದಿದೆ ಎಂದು ಆರೋಪಿಸಿದ್ದಾರೆ.

ಹೈಕಮಾಂಡ್ ಈಗಲಾದರೂ ಪ್ರಮಾಣಿಕರನ್ನು, ಸಂಸ್ಕಾರ ಇರುವವರನ್ನು ರಾಜ್ಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದರೆ ಒಳ್ಳೆಯದು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಕೇವಲ ಸಂದೇಶ ನೀಡುವ ಕೆಲಸ ಮಾಡಿದ ಕಾರಣದಿಂದಲೇ ಈ ಸೋಲಾಗಿದೆ. ಬಿಜೆಪಿ ಹೈಕಮಾಂಡ್ ಇನ್ನಾದರೂ ಪೂಜ್ಯ ತಂದೆ ಮತ್ತು ಪೂಜ್ಯ ಮಗನ ಮೇಲಿನ ವ್ಯಾಮೋಹವನ್ನು ಬಿಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಪೂಜ್ಯ ತಂದೆ (ಬಿಎಸ್‌ವೈ) ಹಾಗೂ ಮಗ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ವಿಚಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಕ್ಫ್ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬರಲ್ಲ ಅಂತಿದ್ರು. ಔರಂಗಜೇಬನ ಸಮಾಧಿಗೆ ನಮಸ್ಕರಿಸಿದ್ದರಿಂದ ಮಹಾರಾಷ್ಟ್ರ ಜನ ಉದ್ಧವ್ ಠಾಕ್ರೆ ಅವರನ್ನು ರಾಜಕೀಯವಾಗಿ ಮುಗಿಸಿದರು. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ಇನ್ನು ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದೆ. ಜೊತೆಗೆ ಜನರು ಕೂಡ ಅಭಿವೃದ್ಧಿಯಿಂದ ವಂಚಿತರಾಗುತ್ತೇವೆ ಎಂಬ ದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಸರ್ಕಾರದ ಹಗರಣ ಬಯಲಿಗೆಳೆಯುವ ಕೆಲಸವನ್ನು ಬಿಜೆಪಿ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಭರವಸೆ ಇತ್ತು. ಸದ್ಯ ನಮ್ಮ ಲೆಕ್ಕಾಚಾರ ತಲೆಕೆಳಗಾಗಿಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಂಡೂರು ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿದೆ, ನಮಗೆ ಕಠಿಣ ಸವಾಲು ಎನಿಸಿದ್ದು ಸಂಡೂರು ಎಂದು ಅವರು ಹೇಳಿದ್ದಾರೆ.
ದೇವೇಗೌಡರು ರೆಸ್ಟ್ ಮಾಡುವ ಸಮಯ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದು, ನಿಖಿಲ್ ಕುಮಾರಸ್ವಾಮಮಿಯ ಹ್ಯಾಟ್ರಿಕ್ ಸೋಲಿಗೆ ಕಾರಣವಾಗಿದ್ದಾರೆ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ನಿಖಿಲ್ ಕುಮಾರಸ್ವಾಮಿ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನ ಬಲಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಕುಮಾರಸ್ವಾಮಿ ಮನಸ್ಸು ಮಾಡಿದ್ರೆ, ನಿಖಿಲ್ ಅವರನ್ನು ಮಂಡ್ಯದಲ್ಲೇ ನಿಲ್ಲಿಸಿ ಲೋಕಸಭೆಗೆ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗಬೇಕು ಎನ್ನುವ ಆಸೆಯಿಂದ ತಾವೇ ಅಲ್ಲಿಂದ ಸ್ಪರ್ಧಿಸಿ ಈಗ ಮಗನನ್ನು ಬಲಿಕೊಟ್ಟರು. ದೇವೇಗೌಡರು ದೈತ್ಯ ಶಕ್ತಿ ಎನ್ನುವುದು ನಿಜ. ಆದರೆ, ಅವರಿಗೆ ಈಗ ವಯಸ್ಸಾಗಿದೆ. ಈ ಕಾರಣದಿಂದಲೇ ಜನ ಅವರನ್ನು ಎಲೆಕ್ಷನ್‌ನಲ್ಲಿ ತಿರಸ್ಕರಿಸಿದ್ದಾರೆ. ದೇವೇಗೌಡರಿದಗೆ ವಿಶ್ರಾಂತ ಜೀವನ ನಡೆಸಲು ಇದು ಸಕಾಲ. ಜೆಡಿಎಸ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶವೇ ಸಂಕೇತ ಎಂದು ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications