ಅಧಿಕಾರ ದುರ್ಬಳಕೆ ಆರೋಪ, ಸಚಿವ ಕಾರಜೋಳ ವಿರುದ್ಧದ ಖಾಸಗಿ ದೂರು ವಜಾ
ಬೆಂಗಳೂರು,ಮೇ 7. ಅಧಿಕಾರ ದುರ್ಬಳಕೆ ಆರೋಪ ಪ್ರಕರಣದಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಪುತ್ರ, ಬಿಜೆಪಿ ನಾಯಕ ಅರುಣ ಕಾರಜೋಳ ಸೇರಿ 11 ಮಂದಿ ವಿರುದ್ಧದ ಖಾಸಗಿ ದೂರನ್ನು ರದ್ದುಗೊಳಿಸಿದೆ.
ಮುಧೋಳದ ಗಣೇಶ್ ಎಂಬುವರು ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್ ಈ ಆದೇಶ ಮಾಡಿದ್ದಾರೆ.
ಕೋರ್ಟ್ ಏನು ಹೇಳಿದೆ?: ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ, ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಬಿರಾದಾರ್, ಸಚಿವ ಗೋವಿಂದ ಕಾರಜೋಳ, ಪುತ್ರ ಅರುಣ ಕಾರಜೋಳ, ಶಂಕರಪ್ಪ ಕುಲಕರ್ಣಿ, ಶೇಖರ, ಶ್ರೀದೇವಿ, ಸುನಿಲ್, ಪರಶುರಾಮ, ಶ್ರೀಕಂಠ, ಚಂದ್ರಕಾಂತ ಮತ್ತು ಸೈದು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಖಾಸಗಿ ದೂರು ದಾಖಲಿದ್ದು, ಇದು ಕಾನೂನಿನ ದುರ್ಬಳಕೆಯಾಗಿದೆ ಎಂದು ಹೇಳಿದೆ.

ದೂರಿನ ವಿವರ ಮತ್ತು ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸದೇ ನ್ಯಾಯಾಲಯವು ಯಾಂತ್ರಿಕವಾಗಿ ಪ್ರಕರಣದ ತನಿಖೆಗೆ ಆದೇಶಿಸಲಾಗದು. ದೂರಿನಲ್ಲಿನ ಆರೋಪ ಯಾವುದೇ ಅಪರಾಧಕ್ಕೆ ಸಮನಾಗುವುದಿಲ್ಲ. ಸಿಆರ್‌ಪಿಸಿ 197ರ ಅಡಿ ಇನ್‌ಸ್ಪೆಕ್ಟರ್ ಬಿರಾದಾರ್ ವಿರುದ್ಧ ಸಂಜ್ಞೆ ಅಪರಾಧ ಸ್ವೀಕರಿಸಲು ನಿರ್ಬಂಧವಿದೆ. ಹೀಗಾಗಿ, ಅರ್ಜಿ ಪುರಸ್ಕರಿಸಲಾಗದು ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ದಾಖಲೆಗಳನ್ನು ಆಧರಿಸಿ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಅವರು ರಾಜಕಾರಣಿಗಳ ಜೊತೆಗೆ ಶಾಮೀಲಾಗಿ ಅರ್ಜಿದಾರರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬುದನ್ನು ಪರಿಗಣಿಸಿ ಅಧಿಕಾರಿಯ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆಗೆ ಅನುಮತಿ ನೀಡಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
''ಕಲ್ಲಪ್ಪ ಎಂಬುವರು ದಾಖಲಿಸಿರುವ ಮೂಲ ದೂರಿನಲ್ಲಿ ಹಾಲಿ ದೂರುದಾರ ಗಣೇಶ್ ಪಾತ್ರವಿಲ್ಲ. ಪೊಲೀಸ್ ಇನ್ಸ್‌ಪೆಕ್ಟರ್ ಬಿರಾದಾರ್ ನಡತೆಯಿಂದ ಕಲ್ಲಪ್ಪಗೆ ಸಮಸ್ಯೆಯಾಗಿದ್ದರೆ ಅದನ್ನು ತನಿಖಾಧಿಕಾರಿಯ ಗಮನಕ್ಕೆ ತರಬೇಕು ಅಥವಾವಿಚಾರಣೆಯ ವೇಳೆ ನ್ಯಾಯಾಧೀಶರ ಗಮನಕ್ಕೂ ತರಬಹುದಾಗಿದೆ. ಐದನೇ ಆರೋಪಿಯಾಗಿರುವ ಶೇಖರ್ ದಾಖಲಿಸಿರುವ ದೂರಿನಲ್ಲಿ ಹಾಲಿ ದೂರುದಾರ ಗಣೇಶ್‌ಅವರ ಪಾತ್ರವಿದೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್ 156(3)ರ ಅಡಿ ತನಿಖೆ ಆದೇಶಿಸಲು ಸಕಾರಣಗಳಿಲ್ಲ''ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಘಟನೆಯ ವಿವರ: ಕಲ್ಲಪ್ಪ ಮತ್ತು ಹಾಲಿ ಐದನೇ ಆರೋಪಿಯಾಗಿರುವ ಶೇಖರ್ ನಡುವೆ ಗಲಾಟೆಯಾಗಿ ಪರಸ್ಪರ ದೂರು-ಪ್ರತಿ ದೂರನ್ನು ಪೊಲೀಸರಲ್ಲಿ ದಾಖಲಿಸಿದ್ದರು. ಆಗ ಗಣೇಶ್ ಕಲ್ಲಪ್ಪನ ಪರವಾಗಿದ್ದಾರೆಂದು ಅವರ ಹೆಸರನ್ನು ಹೆಚ್ಚುವರಿ ಎಫ್ ಐಆರ್ ನಲ್ಲಿ ಸೇರಿಸಲಾಗಿದೆ. ಇದು ದ್ವೇಷದ ಕಾರಣಕ್ಕೆ ಮಾಡಿದ್ದಾರೆ, ಇದು ಅಧಿಕಾರ ದುರುಪಯೋಗವಾಗಲಿದ್ದು, ಹಾಗಾಗಿ ಸಚಿವರು ಸೇರಿ 11 ಮಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.












Click it and Unblock the Notifications