ಕಾಂಗ್ರೆಸ್ ನತ್ತ ಸೋಮಣ್ಣ ಚಿತ್ತ; ಡಿಕೆ ಶಿವಕುಮಾರ್ ಜೊತೆಗಿನ ಫೋಟೋ ವೈರಲ್: ಈ ಕುರಿತು ವಿ. ಸೋಮಣ್ಣ ಹೇಳಿದ್ದೇನು?
ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಲು ವಿ ಸೋಮಣ್ಣ ಮುಂದಾ೦ಗಿದ್ದು, ಇದೀಗ ಡಿ ಕೆ ಶಿವಕುಮಾರ್ ಜೊತೆಗಿನ ಪೋಟೋ ವೈರಲ್ ಆಗಿದೆ.
ಬೆಂಗಳೂರು,ಮಾರ್ಚ್14 : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದ್ದು, ಬಿಜೆಪಿ ಮೇಲೆ ಅಸಮಾಧಾನಗೊಂಡಿರುವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯ ಬಿಜೆಪಿ ನಾಯಕರಿಂದ ಅಂತರವನ್ನ ಕಾಯ್ದುಕೊಂಡ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ವಿ ಸೋಮಣ್ಣ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಿಂದ ವೈರಲ್ ಆಗುತ್ತಿದ್ದು, ಇದೀಗ ಬಿಜೆಪಿ ನಾಯಕರಿಗೆ ಆತಂಕ ಶುರುವಾಗಿದೆ.

ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೆ ಡಿ.ಕೆ ಶಿವಕುಮಾರ್ ಮತ್ತು ಸೋಮಣ್ಣ ಒಟ್ಟಿಗೆ ಕುಳಿತು ಮಾತನಾಡುತ್ತಿರುವ ದೃಶ್ಯದ ಫೋಟೊ ವೈರಲ್ ಆಗಿದ್ದು ಈ ಕುರಿತು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಕೆಪಿಸಿಸಿ ಡಿಕೆ ಶಿವಕುಮಾರ್ ಮತ್ತು ನಾನು ಇರುವ ಆ ಫೋಟೊ ಯಾವುದೋ ಕಾಲದ್ದು. ಆದರೆ ಈಗ ಫೋಟೊ ವೈರಲ್ ಆಗಿದೆ. ಈಗ ವೈರಲ್ ಮಾಡಿದ್ರೆ ಏನು ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.
ನಾನು ಬಿಜೆಪಿ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ. ನನಗೆ ಇತಿಮಿತಿ ಗೊತ್ತಿದೆ. ನಾನು ಯಾರ ಹತ್ತಿರನೂ ಹೇಳಿಸಿಕೊಳ್ಳಲ್ಲ. ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡತ್ತೇನೆ. ಬಿಜೆಪಿ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಯಡಿಯೂರಪ್ಪ ಹಾಗೂ ನಳೀನ್ ಕುಮಾರ್ ಕಟೀಲ್ ನಮ್ಮ ನಾಯಕರು ಎಂದು ಹೇಳಿದರು.

ನಾನು ಯಾರ ಹತ್ರನೂ ಹೇಳಿಸಿಕೊಳ್ಳಬೇಕಿಲ್ಲ, ನಾನು ಬಿಜೆಪಿಲಿ ಸಕ್ರೀಯನಾಗಿ ಕೆಲಸ ಮಾಡ್ತಾ ಇದ್ದೀನಿ, ಆ ತರಹದ ಊಹಾಪೋಹಗಳು ನಂದಲ್ಲ. ನಾನು ಬಿಜೆಪಿಯಲ್ಲಿದ್ದೇನೆ. ಬಿಜೆಪಿಯ ನಾಯಕನಾಗಿದ್ದೇನೆ, ನನ್ನ ಕೆಲಸ ನಾನು ಮಾಡ್ತಾ ಇದ್ದೀನಿ. ನನಗೆ ಚಿಲ್ಲರೆ ಬುದ್ಧಿ ಗೊತ್ತಿಲ್ಲ, ಚಿಲ್ಲರೆ ರಾಜಕಾರಣ ನಾನು ಮಾಡಲ್ಲ. ಇನ್ನೊಬ್ಬರ ತರ ಆಟ ಆಡಿಸೋದು ಗೊತ್ತಿಲ್ಲ ಎಂದು ಹೇಳಿದರು.
ಇನ್ನೂ ಕೆಲವು ಸಂಗತಿಗಳನ್ನು ಹೇಳುವಾಗ ನಿಷ್ಠುರವಾಗಿ ಮಾತಾಡ್ತಿನಿ. ಆ ನಿಷ್ಠುರ ಪಕ್ಷಕ್ಕೆ ಅಲ್ಲ, ಕೆಲವು ಕಹಿ ಘಟನೆಗಳು ಆಗಬಾರದು. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ನಮ್ಮ ತಾಲ್ಲೂಕಿನವರು. ಡಿಕೆ ಶಿವಕುಮಾರ್ ಅವರು ನನ್ನನ್ನು ಸಂಪರ್ಕಿಸಿಲ್ಲ, ಕೆಲಸ ಆದ್ರೆ ಅದೇ ದೇವರು, ಇನ್ನೊಂದು ಪಾರ್ಟಿ, ಮತ್ತೊಂದು ಪಾರ್ಟಿ, ಮಗದೊಂದು ಪಾರ್ಟಿ ಅಂತಿಲ್ಲ ಎಂದು ತಿಳಿಸಿದರು.
ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಈ ತರ ಕೇಳಿದ್ರೆ ನಮಗೆ ಸಿಟ್ಟು ಬರಿಸುತ್ತೀರಾ. ನಾನು ಬಿಜೆಪಿಯ ನಾಯಕನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications