ಸಚಿನ್ ಸಾವಿನ ಪ್ರಕರಣ; ಪ್ರಿಯಾಂಕ ಖರ್ಗೆ ರಾಜೀನಾಮೆ: ಬಿ ವೈ ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು,ಡಿಸೆಂಬರ್ 31: ಸಚಿನ್ ಸಾವಿನ ಪ್ರಕರಣದ ಸಂಬಂಧ ಸಚಿವ ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದು, ದುರ್ಘಟನೆಯ ಸಿಬಿಐ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ನ್ಯಾಯಕ್ಕಾಗಿ ಸಿಬಿಐ ತನಿಖೆಗೆ ಸಚಿನ್ ಕುಟುಂಬವೂ ಒತ್ತಾಯಿಸಿದೆ. ಹಿಂದೆ, ಇದೇ ಸರಕಾರದ ಸಚಿವ ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಕ್ಷಣವೂ ತಡ ಮಾಡದೆ, ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಿದರು. ಯಾರನ್ನೋ ಉಳಿಸುವ, ರಕ್ಷಿಸುವ ದುಸ್ಸಾಹಸ ಬೇಡ ಎಂದು ಎಚ್ಚರಿಸಿದರು.

ಮೇಧಾವಿ ಪ್ರಿಯಾಂಕ್ ಖರ್ಗೆಯವರಿಗೆ ಮರೆವು ಜಾಸ್ತಿ. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದನ್ನು ಪ್ರಿಯಾಂಕ್ ಮರೆಯಬಾರದು. ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಜಾರ್ಜ್ ಅವರು ಕೂಡ ರಾಜೀನಾಮೆ ಕೊಟ್ಟು, ಸಿಬಿಐ ತನಿಖೆ ಆಗಿ ಕ್ಲೀನ್ ಚಿಟ್ ಬಂದಿತ್ತು.
ಸಚಿನ್ ಅವರ ಕುಟುಂಬಕ್ಕೆ ತಕ್ಷಣದಿಂದ ಭದ್ರತೆ ಕೊಡಬೇಕು. ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು. ಹಲವರು ವಿದ್ಯಾವಂತರಿದ್ದು, ಕುಟುಂಬದ ಒಬ್ಬರು ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು. ಹಿಂದೂ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ಧಲಿಂಗ ಸ್ವಾಮೀಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್‍ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯ ಎಂದರು. ರಾಜ್ಯದ ಪೊಲೀಸ್ ಇಲಾಖೆಯಿಂದ ಅಂಥ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ, ಬಿಟಿ ಮಾತ್ರವಲ್ಲ. ಅವರು ಸರ್ವ ಇಲಾಖೆಯ ಸಚಿವರು. ಸದನದಲ್ಲಿ ಗೃಹ ಸಚಿವರಿದ್ದರೂ, ಸಿಎಂ ಕುರಿತು ಪ್ರಶ್ನೆ ಇದ್ದರೂ ಅವರ ಪರವಾಗಿ ಇವರು ಎದ್ದೇಳುತ್ತಾರೆ. ಗಲಾಟೆ ಮಾಡುತ್ತಾರೆ. ಪ್ರಿಯಾಂಕ್ ಖರ್ಗೆ ಅವರು ಬಹಳ ಜ್ಞಾನಿ, ಮೇಧಾವಿ, ಬುದ್ಧಿವಂತರು, ಅಷ್ಟೇ ಪ್ರಭಾವಿ, ಶಕ್ತಿಶಾಲಿ ಮುಖಂಡ ಎಂದು ತಿಳಿಸಿದರು. ಯಡಿಯೂರಪ್ಪ ಅವರ ಪೋಸ್ಕೊ ಕೇಸನ್ನು ಮುಚ್ಚಿಹಾಕಲು ಎಂಬ ಮಾತನ್ನು ಪ್ರಿಯಾಂಕ್ ಖರ್ಗೆಯವರು ಹೇಳಿದ್ದು, ಅವರು ಸುಪ್ರೀಂ ಕೋರ್ಟೇ, ಹೈಕೋರ್ಟೇ ಎಂದು ಪ್ರಶ್ನಿಸಿದರು.
ಇದೇ 27ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ನಿನ್ನೆ ನಾನು, ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‍ಗೆ 5 ಜನರು ಸಹೋದರಿಯರಿದ್ದಾರೆ ಎಂದು ವಿವರಿಸಿದರು. ಬಿಜೆಪಿಯವರಿಗೆ ರಾಜಕೀಯ ತೆವಲು, ಚಟ, ಹಿಟ್ ಆಂಡ್ ರನ್ ಎಂದು ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದರು.
ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿಕೊಂಡಿದ್ದಾಗ ಅವÀರ ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಕೇಳಿದರೆ ಪ್ರಾಣ ಉಳಿಸಲು ಕೋರಿದರೆ, ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೆ, ಅಮಾನವೀಯವಾಗಿ ಪಿಎಸ್‍ಐ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅವರನ್ನು ಪೊಲೀಸ್ ಸ್ಟೇಷನ್‍ಗಳಿಗೆ ತಿರುಗಾಡಿಸಿದ್ದರು ಎಂದು ಟೀಕಿಸಿದರು.












Click it and Unblock the Notifications