KS Eshwarappa Resignation : ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ
ಬೆಂಗಳೂರು, ಏಪ್ರಿಲ್ 15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ವಿಪಕ್ಷಗಳ ತೀವ್ರ ಆಗ್ರಹ, ಬಿಜೆಪಿ ಹೈಕಮಾಂಡ್ ಸಲಹೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಕೆ.ಎಸ್. ಈಶ್ವರಪ್ಪ ಇಂದು (ಶುಕ್ರವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗದಗ ಜಿಲ್ಲಾ ಪ್ರವಾಸ ಮುಗಿಸಿ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಎಚ್ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ರಸ್ತೆ ಮೂಲಕ ರೇಸ್ ಕೋರ್ಸ್ ರಸ್ತೆಯ ನಿವಾಸಕ್ಕೆ ಬಂದ ಸಿಎಂ ಬೊಮ್ಮಾಯಿ ಬಂದರು.

ಇಂದು ಮಧ್ಯಾಹ್ನ ಶಿವಮೊಗ್ಗದ ಬಿಜೆಪಿ ಕಚೇರಿಯಿಂದ ಸಚಿವ ಈಶ್ವರಪ್ಪ ಅವರು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ನಿಗದಿಯಂತೆ ಇಂದು ಸಂಜೆ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೆ.ಎಸ್. ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿದ್ದರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಸಿಎಂ ನಿವಾಸದೆದುರು ಜಮಾಯಿಸಿರುವ ಕೆ.ಎಸ್. ಈಶ್ವರಪ್ಪ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಈಶ್ವರಪ್ಪ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮತ್ತು 40% ಕಮಿಷನ್ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ರಾಜೀನಾಮೆ ಪತ್ರ ಸಲ್ಲಿಕೆ ವೇಳೆ ಶಿವಮೊಗ್ಗ ಮೇಯರ್ ಸುನಿತಾ, ಕುರುಬ ಸಮುದಾಯದ ಸಚಿವರಾದ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್ ಸಾಥ್ ನೀಡಿದರು.
ಡಿ.ಕೆ. ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸಲ್ಲಿಸುವ ವೇಳೆ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮತ್ತು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications