ಬಿಎಸ್‌ವೈ ಪತ್ನಿ ಸಾವಿನ ಹಿಂದೆ ಸಚಿವೆ ಶೋಭಾ ಪಾತ್ರ: ಸಚಿವನಿಂದ ಗಂಭೀರ ಆರೋಪ
ಮುಡಾ ಕೇಸ್ ವಿಚಾರವಾಗಿ ಕಾಂಗ್ರೆಸ್ ಸಚಿವ ಬೈರತಿ ಸುರೇಶ್ ಹಾಗೂ ಬಿಜೆಪಿ ಕೇಂದ್ರ ಸಚಿವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡುವೆ ಟಾಕ್ ವಾರ್ ಜೋರಾಗಿದೆ. ಇದು ಸದ್ಯ ರಾಜ್ಯ ರಾಜಕಾರಣವೇ ಬೆಚ್ಚಿಬೀಳಿಸುವ ಮಟ್ಟಕ್ಕೆ ತಲುಪಿದೆ.
ಹೌದು ಶೋಭಾ ಕರಂದ್ಲಾಜೆ ಅವರು ಬೈರತಿ ಸುರೇಶ್ ಅವರ ಬಗ್ಗೆ ಮುಡಾ ಕೇಸ್ ವಿಚಾರವಾಗಿ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬೈರತಿ ಸುರೇಶ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿಯ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎನ್ನುವ ಅನುಮಾನವಿದೆ ಎಂದಿದ್ದಾರೆ. ಸದ್ಯ ಸುರೇಶ್ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ರೆಕ್ಕೆಪುಕ್ಕ ಬಂದಿದೆ.

ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಅನ್ನೋ ಡೌಟ್ ಇದೆ. ಅವರ ಸಾವಿನ ಬಗ್ಗೆಯೂ ತನಿಖೆಯಾಗಲಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಸಿಎಂ ಆದ ಬಿ.ಎಸ್.ಯಡಿಯೂರಪ್ಪನವರು ತುಂಬಾ ಒಳ್ಳೆಯವರು. ಅವರ ಮಕ್ಕಳು ಕೂಡ ತುಂಬಾ ಒಳ್ಳೆಯವರು. ಹೀಗಿರುವಾಗ ಬಿಎಸ್‌ವೈ ಅವರ ಪತ್ನಿಯ ಸಾವು ಹೇಗಾಯ್ತು? ಎಂದು ಪ್ರಶ್ನಿಸಿದ್ದಾರೆ. ಅವರ ಸಾವಿನಲ್ಲಿ ಶೋಭಾ ಅವರದ್ದೇ ಏನೋ ಪಾತ್ರವಿದೆ ಎನ್ನುವ ಅನುಮಾನ ನನಗಿದೆ. ಈ ಬಗ್ಗೆ ತನಿಖೆಯಾದರೆ ಒಳ್ಳೆಯದು. ಆಗ ಶೋಭಾ ಅವರು ಅರೆಸ್ಟ್ ಆಗಲೇಬೇಕು. ಸಚಿವೆ ಸ್ಥಾನಕ್ಕೂ ರಾಜೀನಾಮೆ ಕೊಡಬೇಕು ಎಂದು ಬೈರತಿ ಸುರೇಶ್ ಆಗ್ರಹಿಸಿದ್ದಾರೆ. ಈ ಮೂಲಕ ಮುಡಾ ಕೇಸ್ ವಿಚಾರವಾಗಿ ಶೋಭಾ ಅವರ ಆರೋಪಗಳಿಗೆ ಸಚಿವ ಸುರೇಶ್ ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯ ಖಂಡನೆ: ಸಚಿವ ಬೈರತಿ ಸುರೇಶ್ ಅವರು ನೀಡಿರುವ ಹೇಳಿಕೆ ಅವರ ವ್ಯಕ್ಯಿತ್ವಕ್ಕೆ ಶೋಭೆ ತರುವಂತದಲ್ಲ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಮಾನಹಾನಿಕರಕ ಹೇಳಿಕೆ ನೀಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗುಡುಗಿದ್ದಾರೆ.
ಸಚಿವ ಬೈರತಿ ಸುರೇಶ್ ಇವತ್ತು ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನೀಡಿರುವ ಹೇಳಿಕೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು ಹಾಗೂ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಶೋಭಾಗೆ ಸುರೇಶ್ ಸವಾಲ್: ನಾನು ಶ್ರೀರಾಮನ ಭಕ್ತ. ನಮ್ಮ ಮನೆ ದೇವರು ಕೂಡ ಶ್ರೀರಾಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಶ್ರೀವತ್ಸ ಅವರು ಶ್ರೀರಾಮನ ಮೇಲೆ ಆಣೆ ಮಾಡಿ ಹೇಳಲಿ. ನಾನು ಮುಡಾದಿಂದ ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದೇನೆ ಎಂದು ಅವರು ದೇವರ ಮೇಲೆ ಆಣೆ ಮಾಡಿ ಹೇಳಲಿ ಎಂದು ಸಚಿವ ಬೈರತಿ ಸುರೇಶ್ ಸವಾಲ್ ಹಾಕಿದ್ದಾರೆ. ಸದ್ಯ ಶೋಭಾ ಕರಂದ್ಲಾಜೆ ಹಾಗೂ ಸಚಿವ ಬೈರತಿ ಸುರೇಶ್ ಅವರ ನಡುವಿನ ವಾಕ್ಸಮರವು ಹೊಸ ತಿರುವುಗಳನ್ನು ಪಡೆದುಕೊಳ್ಳಿತ್ತಿದೆ.












Click it and Unblock the Notifications