Price Hike: ಇಂದಿನಿಂದ ವಿದ್ಯುತ್, ಹಾಲಿನ ಹೊಸ ದರ ಅನ್ವಯ: ಹಾಲಿನ ಉತ್ಪನ್ನಗಳು ದುಬಾರಿ
ಬೆಂಗಳೂರು, ಏಪ್ರಿಲ್ 01: ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಬೆಲೆ ಏರಿಕೆ ಬರೆ ಮುಂದುವರೆಸಿದೆ. ಈಗಾಗಲೇ ಘೋಷಿಸಿದಂತೆ ಪರಿಷ್ಕೃತ ವಿದ್ಯುತ್ ದರ ಹಾಗೂ ಹಾಲಿನ ದರ ಇಂದಿನಿಂದ (ಏಪ್ರಿಲ್ 1 ಆರ್ಥಿಕ ವರ್ಷದಿಂದ) ಅನುಷ್ಠಾನಕ್ಕೆ ಬರಲಿದೆ. ಬಸ್, ನಮ್ಮ ಮೆಟ್ರೋ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗಲಿದೆ. ಕೆಲವೆಡೆ ದರ ಏರಿಕೆ ವಿರುದ್ಧ ಪ್ರತಿಭಟನೆ ಸಹ ನಡೆದಿವೆ.
ಮಂಗಳವಾರದಿಂದ ಗ್ರಾಹಕರಿ ಪ್ರತಿ ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚುವರಿ ಹಣ ನೀಡಬೇಕು. ವಿದ್ಯುತ್ ದರ ಸಹಿತ ಪ್ರತಿ ಯೂನಿಟ್‌ಗೆ 36 ಪೈಸೆಯಷ್ಟು ಪರಿಷ್ಕೃತಗೊಂಡಿದೆ. ಹಾಲಿನ ದರ ಮಾತ್ರವಲ್ಲದೇ ಮೊಸರಿಗೂ ದರ ರೂ.4 ಹೆಚ್ಚಾಗಿದೆ. ಇದರೊಂದಿಗೆ ಹಾಲಿನ ಉತ್ಪನ್ನಗಳು, ಸಿಹಿ ತಿನಿಸುಗಳು ಸಹ ದುಬಾರಿಯಾಗಲಿವೆ. ಈ ಹೆಚ್ಚುವರಿ ಹಣ ಹಾಲು ಪೂರೈಕೆಯ ರೈತರಿಗೆ ಸಿಗುತ್ತಾ ಅಥವಾ ಇಂಧನ, ಉತ್ಪಾದನೆ, ಸಿಬ್ಬಂದಿ ವೇತನ ಹೆಚ್ಚಳ ಎಂದು ಮಧ್ಯವರ್ತಿಗಳ ಕೈಗೆ ಸೇರುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಹಾಲು ಉತ್ಪಾದನಾ ಮಹಾಮಂಡಳಿ, ಒಕ್ಕೂಟ ಒತ್ತಾಯಕ್ಕೆ ಮಣಿದು ಸರ್ಕಾರ ಹಾಲಿ ದರ ಏರಿಕೆ ಮಾಡಿದೆ ಇದರಿಂದ ಜನರಿಗೂ ಅನುಕೂಲ ಆಗಲ್ಲ. ಹಾಲು ಪೂರೈಸುವ ರೈತರಿಗೂ ಲಾಭ ಆಗುವುದು ಅನುಮಾನ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದು ಸರಿಯಲ್ಲ ಎಂದು ಜನರು ಮತ್ತು ವಿಪಕ್ಷಗಳ ನಾಯಕರು ದೂರಿದ್ದಾರೆ.

ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಸಿಬ್ಬಂದಿ, ಪಿಂಚಣಿದಾರರಿಗೆ ಗ್ರಾಚ್ಯುಟಿ ಹೊಂದಿಸಲು ಹೀಗೆ ಬೆಲೆ ಹೆಚ್ಚಿಸಿದೆ. ಜನರಿಗೆ ಆರ್ಥಿಕ ಹೊರೆ ನೀಡಿದೆ. ಗೃಹ ಬಳಕೆದಾರರಿಗೆ ಸುಮಾರು 25 ರೂಪಾಯಿಯಿಂದ 100 ರೂಪಾಯಿವರೆಗೆ ಹೊರೆ ಬೀಳುವ ಸಾಧ್ಯತೆ ಇದೆ. ಇನ್ನೂ ಪ್ರತಿ ಕಿಲೋ ವೋಲ್ಟ್‌ಗೆ ಈ ಮೊದಲು 120 ರೂಪಾಯಿ ದರ ನಿಗದಿ ಆಗಿತ್ತು. ಅದನ್ನೀಗ 145 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇಂದಿನಿಂದ ಕಸ ನಿರ್ವಹಣೆಗೂ ಅಧಿಕ ವೆಚ್ಚದ
ಇದಷ್ಟೇ ಅಲ್ಲದೇ ಇತ್ತೀಚೆಗೆ ಸರ್ಕಾರ ಕಸ ನಿರ್ವಹಣೆ ವೆಚ್ಚ ಸಹ ಹೆಚ್ಚಿಸಿದ್ದು, ಇದು ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಸಣ್ಣ ಮತ್ತು ದೊಡ್ಡ ಕಟ್ಟಡಗಳ ಆಧಾರದಲ್ಲಿ, ಕಚೇರಿ ಮತ್ತು ಗೃಹ ಬಳಕೆ ಕಸ ನಿರ್ವಹಣೆಗೆ ಕನಿಷ್ಠ 10 ರೂಪಾಯಿಯಿಂದ 400 ರೂಪಾಯಿಗೆ ವರೆಗೆ ಹಣ ಪಾಲಿಕೆಗೆ ಕಟ್ಟಬೇಕು.












Click it and Unblock the Notifications