ಈಶ್ವರಪ್ಪ ಮನೆಲ್ಲಿ ಮಾತಾಡಿದ್ದು ಹೇಳಿದ್ರೆ ವಿಜಯೇಂದ್ರ ರಾಜುಗೌಡನ ಹೊಡಿತ್ತಿದ್ದ: ರಮೇಶ್ ಜಾರಕಿಹೊಳಿ
ಬಿಜೆಪಿಯಲ್ಲಿ ತೆರೆಮರೆಯಲ್ಲಿ ಭಿನ್ನಮತ ರಾಜಕೀಯ ಮುಂದುವರಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪರ ಬಣ ಹಾಗೂ ವಿರೋಧಿಗಳ ಬಣ ಎನ್ನುವಂತೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ಇದೀಗ ಈ ಭಿನ್ನಮತ ರಾಜಕೀಯ ಬಹಿರಂಗವಾಗಿಯೂ ಸಾಕಷ್ಟು ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಬಿಜೆಪಿ ಮುಖಂಡ ರಾಜುಗೌಡ ಅವರ ಬಗ್ಗೆ ಗುಡುಗಿದ್ದಾರೆ. ರಾಜುಗೌಡ ಸ್ವಭಾವವೇ ಆ ರೀತಿ ಇದೆ. ಈಶ್ವರಪ್ಪ ಮನೆಯಲ್ಲಿ ಅವನು ಇದ್ದಾನೆ ಅಂತ ಗೊತ್ತಾಗಿದ್ದರೆ, ನಾನು ಅವರ ಮನೆ ಒಳಗೂ ಹೋಗ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕೆ.ಎಸ್ ಈಶ್ವರಪ್ಪ ಅವರ ಮನೆಯಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ, ಬಿಜೆಪಿ ಮುಖಂಡ ರಾಜುಗೌಡ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಭೆ ನಡೆಸಿದ್ದರು. ಈ ಸಭೆಯ ನಂತರ ಮಾತನಾಡಿದ ರಮೇಶ್ ಜಾರಕಿಹೊಳಿ ಅಲ್ಲಿ ರಾಜಕೀಯದ ವಿಷಯವೇನು ಚರ್ಚೆಯಾಗಲಿಲ್ಲ. ಆದರೆ, ಸಭೆಯಲ್ಲಿ ನಿಜವಾಗಿಯೂ ಚರ್ಚೆಯಾಗಿರುವ ವಿಷಯಗಳನ್ನು ರಾಜುಗೌಡ ಮಾಧ್ಯಮಗಳ ಮುಂದೆ ಹೇಳಿಲ್ಲ. ಚರ್ಚೆಯಾಗಿರುವ ವಿಷಯಗಳ ಬಗ್ಗೆ ಮಾತನಾಡಿದ್ದರೆ, ರಾಜುಗೌಡನನ್ನು ವಿಜಯೇಂದ್ರ ಹೊಡಿತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ ರಾಜುಗೌಡ ಬಿಎಸ್‌ವೈ ಶಿಷ್ಯಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ರಾಜುಗೌಡ ಸ್ವಭಾವ ಮೊದಲಿನಿಂದಲೂ ಹೀಗೆ ಇದೆ ಎಂದು ಕಿಡಿಕಾರಿದ್ದಾರೆ.

ನಾವು (ಬಿಜೆಪಿ ನಾಯಕರು) ಕೆ.ಎಸ್ ಈಶ್ವರಪ್ಪ ಮನೆಗೆ ಹೋಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ನಾನು ಮುಂಬೈನಿಂದ ಬೆಂಗಳೂರಿಗೆ ಬಂದ ಕೂಡಲೇ ಬಸನಗೌಡ ಪಾಟೀಲ ಯತ್ನಾಳ ಅವರು ಕರೆ ಮಾಡಿದ್ದರು. ಕೆ.ಎಸ್ ಈಶ್ವರಪ್ಪ ಮನೆಗೆ ಹೋಗಿ ಬರೋಣ ಬರ್ರಿ ಅಂತ ಕರೆದರು. ಆದರೆ, ಈಶ್ವರಪ್ಪ ಅವರ ಮನೆಗೆ ರಾಜುಗೌಡ ಬಂದಿದ್ದು ನನಗೆ ಗೊತ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕೆ.ಎಸ್ ಈಶ್ವರಪ್ಪ ಅವರು ಹಾಗೂ ಬಸನಗೌಡ ಪಾಟೀಲ ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಬಗ್ಗೆ ಚರ್ಚಿಸಿದ್ದರು. ಅಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ಹಾಗೂ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಬಗ್ಗೆಯಷ್ಟೇ ಚರ್ಚೆ ನಡೆದಿದೆ. ಇನ್ನು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿಗೆ ಕರೆತರುವ ಬಗ್ಗೆಯೂ ಅಲ್ಲೇನು ಚರ್ಚೆ ನಡೆದಿಲ್ಲ. ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿಗೆ ಕರೆತರುವ ಶಕ್ತಿಯೂ ನನಗಿಲ್ಲ. ಈಶ್ವರಪ್ಪರನ್ನು ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಹೀಗಾಗಿ, ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದರು.

ಪಕ್ಷ ಶುದ್ಧೀಕರಣಕ್ಕಾಗಿ ಸಭೆ
ನಾವು ಪಕ್ಷ ಶುದ್ಧೀಕರಣಕ್ಕಾಗಿ ಸಭೆ ಮಾಡುತ್ತಿದ್ದೇವೆ. ನಾವು ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿಲ್ಲ. ನಾವು ಭಿನ್ನಮತೀಯ ನಾಯಕರು ಅಲ್ಲವೇ ಅಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಾವು ಬಿಜೆಪಿಯನ್ನು ಶುದ್ಧೀಕರಣ ಮಾಡುವುದಕ್ಕಾಗಿ ಸಭೆ ಮಾಡ್ತಿದ್ದೇವೆ. ನಮ್ಮದು ಸಂಘಟನೆಗೆ ಮಾತ್ರ ಸಭೆ. ಅಲ್ಲದೇ ಪಕ್ಷದ ಚೌಕಟ್ಟಿನಲ್ಲಿಯೇ ನಾವು ಕೆಲಸ ಮಾಡ್ತಿದ್ದೇವೆ ಎಂದ ರಮೇಶ್ ಜಾರಕಿಹೊಳಿ ತಿಳಿಸಿದರು. ಇನ್ನು ಕೆಎಸ್ ಈಶ್ವರಪ್ಪ ಅವರ ಆರ್‌ಸಿಬಿ ಬ್ರಿಗೇಡ್ ಸ್ಥಾಪನೆ ಬಗ್ಗೆ ಮಾತನಾಡಿದ ಅವರು,ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕ. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಸಂಘಟನೆ ಮಾಡಬಹುದು. ಅದು ಪ್ರತಿಯೊಬ್ಬರ ಹಕ್ಕು.
ಆದರೆ, ಅವರ ಮನೆಯಲ್ಲಿ ಸೇರಿದನ್ನು ರಾಜಕೀಯ ಮಾಡಿರುವ ಬಗ್ಗೆ ಬೇಸರವಿದೆ ಎಂದು ಹೇಳಿದರು.












Click it and Unblock the Notifications