ಜೀವಾವಧಿ ಶಿಕ್ಷೆಯಲ್ಲಿರುವ ಪ್ರಜ್ವಲ್ ಕೇಸ್‌ನಲ್ಲಿ ಕುಟುಂಬಸ್ಥರ ನಿರ್ಧಾರವೇನು? ಸೂರಜ್ ರೇವಣ್ಣ ಮೊದಲ ಪ್ರತಿಕ್ರಿಯೆ
ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಜೆಡಿಎಸ್ ಮಾಜಿ ಸಂಸದ ಹಾಗೂ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ. ಹೀಗಾಗಿ ಪ್ರಜ್ವಲ್ ಅವರು ಅಧಿಕೃತ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲುವಾಸ ಮುಂದುವರಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಪ್ರಜ್ವಲ್‌ಗೆ ಇನ್ನೂ ಅವಕಾಶಗಳಿಗೆ ಎಂದು ಹೇಳಲಾಗಿತ್ತು. ಇನ್ನು ಪ್ರಜ್ವಲ್ ಅವರನ್ನು ರಿಲೀಸ್ ಮಾಡಿಸಲು ಅವರ ಕುಟುಂಬ ಮಾಸ್ಟರ್‌ಪ್ಲ್ಯಾನ್ ಮಾಡಿದೆ. ಈ ಬಗ್ಗೆ ಪ್ರಜ್ವಲ್ ರೇವಣ್ಣ ಸಹೋದರ, ಎಂಎಲ್‌ಸಿ ಸೂರಜ್ ರೇವಣ್ಣ ಮಹತ್ವದ ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ತೀರ್ಪು ಬಂದಾಗಿನಿಂದ ಅವರು ಕುಟುಂಬಸ್ಥರು ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ತೀರ್ಪು ಪ್ರಕಟಿಸಿದ ದಿನವೂ ಪ್ರಜ್ವಲ್‌ನ ನೋಡಲು ಕೋರ್ಟ್‌ಗೂ ಬಂದಿರಲಿಲ್ಲ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಮಾತ್ರವೇ ಪ್ರಜ್ವಲ್ ಕೇಸ್ ಬಗ್ಗೆ ಮಾತನಾಡಿ, ಕಾನೂನಿಗೆ ತಲೆಬಾಗಬೇಕು ಎಂದಿದ್ದರು. ಇದೀಗ ತನ್ನ ಒಡಹುಟ್ಟಿದ ಸಹೋದರ ಸೂರಜ್ ರೇವಣ್ಣ ಅವರು ಪ್ರಜ್ವಲ್ ಕೇಸ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿದ್ದಾರೆ.

ಸಹೋದರ ಪ್ರಜ್ವಲ್ ರೇವಣ್ಣ ಅವರ ಕೇಸ್‌ನಲ್ಲಿ ಕೋರ್ಟ್‌ನಿಂದ ತೀರ್ಪು ಬಂದಿದೆ. ಇದನ್ನು ಪ್ರಶ್ನಿಸಿ ಮೇಲಿನ ಹಂತದ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಹಾಗಾಗಿ ಅದರ ಬಗ್ಗೆ ಏನೂ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಹಾಗಾಗಿ ನಾವು ಯಾರೂ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದಿದ್ದಾರೆ. ಇನ್ನು ಕೋರ್ಟ್‌ನಲ್ಲಿ ಪ್ರಜ್ವಲ್ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ವಾ? ಎಂಬ ಪ್ರಶ್ನೆಗೂ ಸೂರಜ್ ಉತ್ತರ ಕೊಡಲಿಲ್ಲ. ಆದರೆ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ಕುಟುಂಬ ಸಿದ್ಧತೆ ನಡೆಸಿರುವುದು ಖಚಿತವಾಗಿದೆ.
ಕೆ.ಆರ್.ನಗರ ಮೂಲದ ಮಹಿಳೆಯೊಬ್ಬರು ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಪ್ರಜ್ವಲ್ ಆ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ದೂರು ದಾಖಲಾಗಿತ್ತು. ಪ್ರಜ್ವಲ್ ಮೇಲೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಇದು ಕೂಡ ಒಂದು. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಪ್ರಜ್ವಲ್ ಅಪರಾಧಿ ಎಂದು ತೀರ್ಪು ಪ್ರಕಟಿಸಿತ್ತು.

ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ಜೊತೆ ಐದು ಲಕ್ಷ ದಂಡ ಕೂಡ ವಿಧಿಸಿ ಆದೇಶಿಸಿತ್ತು. ಈ ಮೂಲಕ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಇದಕ್ಕೂ ಮುನ್ನ ಪ್ರಜ್ವಲ್ ಕೋರ್ಟ್‌ನಲ್ಲಿ ಕಣ್ಣೀರಿಟ್ಟಿದ್ದರು. ಜೀವಾವಧಿ ಶಿಕ್ಷೆ ನೀಡಿರುವುದರಿಂದ ಪ್ರಜ್ವಲ್‌ಗೆ ಇನ್ನೂ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ಗೆ ಅವಕಾಶವೂ ಇದ್ದು, ಮೇಲ್ಮನವಿ ಸಲ್ಲಿಸಲಿದ್ದಾರೆ.












Click it and Unblock the Notifications